ಕೊಕ್ಕಡ : ಪುದುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಕುಮಾರಿ ಅವರ ವಿರುದ್ಧ ಸದಸ್ಯರು ತಂದ ಅವಿಶ್ವಾಸ ನಿರ್ಣಯ ಮಂಡನೆ ಯಶಸ್ವಿಯಾಗಿದ್ದು, ಅಧ್ಯಕ್ಷೆ ತಮ್ಮ ಅಧ್ಯಕ್ಷ ಗಾದಿಯನ್ನು ಕಳೆದುಕೊಂಡಿದ್ದಾರೆ.
ಪುದುವೆಟ್ಟು ಗ್ರಾ.ಪಂಚಾಯಿತಿ ಬಿಜೆಪಿ ಬೆಂಬಲಿತರ ಆಡಳಿತವಿದ್ದು, ಅಧ್ಯಕ್ಷರಾಗಿ ಅನಿತಾ ಕುಮಾರಿ ಅವರು ಕಳೆದ ಒಂದೂವರೆ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇತ್ತಿಚೀನ ದಿನಗಳಲ್ಲಿ ನಡೆದ ಕೆಲವೊಂದು ಬೆಳವಣಿಗೆಯಲ್ಲಿ ಅಧ್ಯಕ್ಷರ ವಿರುದ್ಧ ಅವರದೇ ಪಕ್ಷ ಬೆಂಬಲಿತ ಸದಸ್ಯರು ಅಸಮಾಧಾನಗೊಂಡು, ಅಧ್ಯಕ್ಷರ ಪದಚ್ಯುತಿಗೆ ನ.20ರಂದು ಪುತ್ತೂರು ಎ.ಸಿಯವರಿಗೆ ಅವಿಶ್ವಾಸ ಸೂಚನಾ ಪತ್ರ ಸಲ್ಲಿಸಿದ್ದರು.
ಡಿ.12ರಂದು ಬೆಳಿಗ್ಗೆ ಪುತ್ತೂರು ಸಹಾಯಕ ಕಮೀಷನರ್ ಅವರು ಉಪಸ್ಥಿತಿಯಲ್ಲಿ ಅವಿಶ್ವಾಸ ಸೂಚನೆ ನಿರ್ಣಯ ಸಭೆ ನಡೆಯಿತು. ಅಧ್ಯಕ್ಷರ ವಿರುದ್ಧ 7 ಮಂದಿ ಹಾಗೂ ಅಧ್ಯಕ್ಷರ ಪರ ಒಬ್ಬರು ಕೈ ಎತ್ತಿ ಬೆಂಬಲ ಸೂಚಿಸಿದರು. ಇದರಿಂದಾಗಿ ಅಧ್ಯಕ್ಷ ತಮ್ಮ ಅಧ್ಯಕ್ಷ ಗಾದಿಯನ್ನು ಕಳೆದುಕೊಂಡಿದ್ದಾರೆ.
ಉಪಾಧ್ಯಕ್ಷ ಸ್ಥಾನದಲ್ಲಿದ್ದ ಪೂರ್ಣಾಕ್ಷ ಅವರು ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.