ಕಡಬ:ಕಾಲೇಜೊಂದರಲ್ಲಿ ಓದುತ್ತಿದ್ದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿ ಜತೆ ಪ್ರೀತಿಸುವ ನಾಟಕವಾಡಿ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪದಲ್ಲಿ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಓಂಕಲ್ ನಿವಾಸಿ ಪ್ರವೀಣ್ ಪೂಜಾರಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.
ಆತ ಬಾಲಕಿ ಜತೆಗೆ ಸುತ್ತಾಟ ನಡೆಸಿ ವಿಶ್ವಾಸ ಗಳಿಸಿ ಬಳಿಕ ಬಾಡಿಗೆ ರೂಂಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಅದರ ವೀಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ವೆುಲ್ ಮಾಡುತ್ತಿದ್ದ. ಅನೇಕ ಬಾರಿ ಆಕೆಯನ್ನು ಪುತ್ತೂರು ಬಳಿಯ ಬಾಡಿಗೆ ರೂಂಗೆ ಕರೆದೊಯ್ಡು ದೈಹಿಕವಾಗಿ ಬಳಸಿಕೊಂಡಿದ್ದ. ಆಕೆ ಗರ್ಭಿಣಿಯಾಗದಂತೆ ಮಾತ್ರೆಯನ್ನು ತಂದುಕೊಟ್ಟಿದ್ದ. ಅದರ ಜತೆಗೆ ಖಾಸಗಿ ಕ್ಷಣದ ವೀಡಿಯೋಗಳನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೋಮವಾರ ಕುಂಬ್ರದಲ್ಲಿರುವ ಬಾಡಿಗೆ ರೂಂಗೆ ಕರೆದೊಯ್ದು ಅಲ್ಲೇ ಉಳಿದುಕೊಂಡು ದೈಹಿಕ ಸಂಪರ್ಕ ಬೆಳೆಸಿದ್ದ. ಮರುದಿನ ರೂಂನಲ್ಲಿ ಇರುವಾಗಲೇ ಬಾಲಕಿ ಜತೆ ತಗಾದೆ ತೆಗೆದು ದೈಹಿಕ ಹಿಂಸೆ ನೀಡಿ ಜಗಳವಾಡಿದ್ದ. ಬಳಿಕ ಬೈಕಿನಲ್ಲಿ ಕರೆದೊಯ್ದು ಫರಂಗಿಪೇಟೆ ಬಳಿ ರಸ್ತೆ ಬದಿ ಬಿಟ್ಟು ಹೋಗಿದ್ದ. ಮನೆಯವರಿಗೆ ವಿಷಯ ತಿಳಿಸಿದ್ದ ಬಾಲಕಿಗೆ ಮನೆಮಂದಿ ಧೈರ್ಯ ತುಂಬಿ ಮನೆಗೆ ಕರೆದುಕೊಂಡು ಬಂದಿದ್ದರು.
ಯುವಕ ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಆ ವಿಷಯವನ್ನು ಮುಚ್ಚಿಟ್ಟು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾಗಿ ಬಾಲಕಿ ದೂರಿನಲ್ಲಿ ಆರೋಪಿಸಿದ್ದಾಳೆ. ದೂರು ಸ್ವೀಕರಿಸಿದ ಕಡಬ ಪೊಲೀಸರು ಸುಳ್ಯದಲ್ಲಿದ್ದ ಯುವಕನನ್ನು ಬಂಧಿಸಿ ಆತನ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.