ನೆಲ್ಯಾಡಿ:ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಸ್ನೇಹ ಸಮ್ಮಿಲನ-2022, ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಸನ್ಮಾನ

ಶೇರ್ ಮಾಡಿ

ನೇಸರ ಮಾ.03: ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಸ್ನೇಹ ಸಮ್ಮಿಲನ-2022 ಹಾಗೂ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ, ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಪೆರಾಲ್‌ರವರಿಗೆ ಸಂತಜಾರ್ಜ್ ವಿದ್ಯಾಸಂಸ್ಥೆಗಳ ಆಡಳಿತ ಸಮಿತಿ ಅಧ್ಯಕ್ಷ ಬಿಷಪ್ ಮಾರ್ಕೋಸ್ ಮೋರ್ ಕ್ರಿಸೋಸ್ಟಮಸ್‌ರವರ ಅಧ್ಯಕ್ಷತೆಯಲ್ಲಿ ಸನ್ಮಾನ ಕಾರ್ಯಕ್ರಮ ಮಾ.2ರಂದು ನಡೆಯಿತು.

ಸಮಾರಂಭದಲ್ಲಿ ಹರೇಕಳ ಹಾಜಬ್ಬರವರ ಜೀವನ ಚರಿತ್ರೆಯ ಕಿರುಚಿತ್ರ ಪ್ರದರ್ಶಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಹಾಜಬ್ಬ ಹಾಗೂ ಅತಿಥಿಗಳನ್ನು ಶಾಲಾ ದ್ವಾರದ ಬಳಿಯಿಂದ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು.

ಅಕ್ಷರ ಸಂತ ಹರೇಕಳ ಹಾಜಬ್ಬರವರನ್ನು ಸಂತಜಾರ್ಜ್ ವಿದ್ಯಾಸಂಸ್ಥೆ ವತಿಯಿಂದ ಪೇಟ,ಶಾಲು,ಹಾರ, ಫಲತಾಂಬೂಲ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು ಸಂಗ್ರಹಿಸಿದ ದೇಣಿಗೆ ಮೊತ್ತವನ್ನು ವಿದ್ಯಾರ್ಥಿ ನಾಯಕರು ಹಸ್ತಾಂತರಿಸಿದರು. ಪೂರ್ವ ವಿದ್ಯಾರ್ಥಿ ಸಂಘ, ಸೀನಿಯರ್ ಛೇಂಬರ್ ನೆಲ್ಯಾಡಿ, ಜೆಸಿಐ ನೆಲ್ಯಾಡಿ, ನೆಲ್ಯಾಡಿ ವಿವಿ ಘಟಕ ಕಾಲೇಜು, ನೆಲ್ಯಾಡಿ ರಿಕ್ಷಾ ಚಾಲಕ-ಮಾಲಕರ ಸಂಘ, ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆ, ಗೆಳೆಯರ ಬಳಗ ಗಾಂಧಿ ಮೈದಾನ ನೆಲ್ಯಾಡಿ, ಗ್ರಾಮ ಪಂಚಾಯತ್ ನೆಲ್ಯಾಡಿ, ವರ್ತಕ ಸಂಘ ನೆಲ್ಯಾಡಿ, ಮೆಸ್ಕಾಂ ನೆಲ್ಯಾಡಿ ಶಾಖೆ, ಸೈಂಟ್ ತೋಮಸ್ ಚರ್ಚ್ ಕೋಣಾಲು, ಸಮಾನ ಮನಸ್ಕರ ವೇದಿಕೆ ನೆಲ್ಯಾಡಿ, ಸೇವಾ ಸಹಕಾರಿ ಬ್ಯಾಂಕ್ ನೆಲ್ಯಾಡಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅಕ್ಷರ ಸಂತ ಹರೇಕಳ ಹಾಜಬ್ಬರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬರವರು,1977 ರಿಂದ ಜೀವನೋಪಾಯಕ್ಕಾಗಿ ಕಿತ್ತಳೆಹಣ್ಣಿನ ಮಾರಾಟ ಆರಂಭಿಸಿದೆ 2014ರವರೆಗೆ ಮಂಗಳೂರಿನಲ್ಲಿ ಕಿತ್ತಲೆ ಹಣ್ಣಿನ ವ್ಯಾಪಾರ ನಡೆಸುತ್ತಿದ್ದೆ. ಈ ಸಂದರ್ಭದಲ್ಲಿ ನೆಲ್ಯಾಡಿ ಭಾಗದಿಂದಲೂ ಹಂಪನಕಟ್ಟೆಗೆ ಬರುತ್ತಿದ್ದ ಪ್ರಯಾಣಿಕರು ನನ್ನಿಂದ ಕಿತ್ತಳೆಹಣ್ಣು ಖರೀದಿಸಿದ್ದಾರೆ ಎಂದು ನೆನಪಿಸಿಕೊಂಡರು. ಜೂನ್ 15 ಶನಿವಾರ 2001ರಂದು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ, ತನ್ನಂತೆ ಉಳಿದ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ. ತನ್ನ ಕಿತ್ತಳೆ ಹಣ್ಣಿನ ವ್ಯಾಪಾರದಿಂದ ಬರುತ್ತಿದ್ದ ಆದಾಯವನ್ನು ಶಾಲೆಗೆ ವಿನಿಯೋಗಿಸಲು ಪ್ರಾರಂಭಿಸಿದೆ. ನಂತರ ಹಂತ ಹಂತವಾಗಿ ಬೇರೆ ಬೇರೆ ಸವಲತ್ತುಗಳು ದಾನಿಗಳಿಂದ ಶಾಲೆಗೆ ದೊರೆಯುವಂತಾಯಿತು.

28 ಮಕ್ಕಳಿದ್ದ ಶಾಲೆ ಇದೀಗ 300ಕ್ಕಿಂತ ಹೆಚ್ಚು ಮಕ್ಕಳು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಈಗ ಇಲ್ಲಿ 1ರಿಂದ 10ನೇಯ ತನಕ ತರಗತಿ ನಡೆಯುತ್ತಿದೆ, ಎಲ್ಲರ ಸಹಕಾರದಿಂದ ಇದೀಗ 1.33 ಎಕರೆ ಜಾಗ ಶಾಲೆಯ ಹೆಸರಿನಲ್ಲಿದ್ದು. ಮುಂದೆ ಇಲ್ಲಿ ಪಿಯುಸಿ ವಿಭಾಗ ಆರಂಭವಾಗಬೇಕು ಎಂಬುದು ನನ್ನ ಕನಸಾಗಿದೆ, ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದೇನೆ. ನನ್ನನ್ನು ಪ್ರೀತಿಯಿಂದ ನೆಲ್ಯಾಡಿಗೆ ಆಹ್ವಾನಿಸಿ ನನಗೆ ಸನ್ಮಾನಿಸಿರುವುದಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಹಾಜಬ್ಬರವರು ಉತ್ತರಿಸಿದರು.

ಸಂತಜಾರ್ಜ್ ವಿದ್ಯಾಸಂಸ್ಥೆ ವತಿಯಿಂದ ಹಾಗೂ ಪೂರ್ವ ವಿದ್ಯಾರ್ಥಿಗಳಿಂದ ನಿವೃತ್ತ ಮುಖ್ಯಶಿಕ್ಷಕ,ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೆರಾಲ್‌ರವರನ್ನು ಸನ್ಮಾನಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ 10 ವರುಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಸಮಯಪಾಲನೆ, ಸಮಯದ ಹೊಂದಾಣಿಕೆ ಹಾಗೂ ವ್ಯಕ್ತಿತ್ವ ಬದಲಾವಣೆಗೆ ಸಂಪೂರ್ಣವಾದ ಸಹಕಾರ ಇಲ್ಲಿ ದೊರೆತಿದೆ, ಅಲ್ಲದೆ ಸಂಸ್ಥೆಯ ಸಂಚಾಲಕರಾದ ಅಬ್ರಹಾಂ ವರ್ಗೀಸ್ ರವರಿಂದ ಸಂಪೂರ್ಣ ಪ್ರೋತ್ಸಾಹ ದೊರೆತಿದೆ. ವಿದ್ಯಾರ್ಥಿಗಳು ಕನಸು ಕಾಣಬೇಕು. ಜೀವನವನ್ನು ಚಾಲೆಂಜ್ ಆಗಿ ತೆಗೆದುಕೊಂಡರೆ ಅಸಾಧ್ಯವೆಂಬುದನ್ನು ಸಾಧ್ಯವೆಂಬುದಾಗಿ ಮಾಡಿ ತೋರಿಸಬಹುದು ಎಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಭಿನಂದಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕರಾದ ಅಬ್ರಹಾಂ ವರ್ಗೀಸ್ ರವರು ಅತ್ಯಂತ ಬಡತನದಲ್ಲಿ ಇದ್ದುಕೊಂಡು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಕನಸು ಕಂಡು ಅದನ್ನು ನನಸು ಮಾಡಿದಂತಹ ಹರೇಕಳ ಹಾಜಬ್ಬ ಅವರ ಸಾಧನೆಗೆ ಭಾರತ ಸರಕಾರ ನೀಡುವ ನಾಲ್ಕನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ ಇವರಿಗೆ ಲಭಿಸಿದೆ. ಅವರಿಗೆ ಪ್ರಶಸ್ತಿಯಿಂದ ದೊರೆತ ಮೊತ್ತವನ್ನು ಹಾಗೂ ಸನ್ಮಾನದಿಂದ ಬಂದಂತ ಹಣವನ್ನು ಅವರು ಅವರ ಕುಟುಂಬಕ್ಕೆ ಉಪಯೋಗಿಸದೆ ಶಾಲೆಯ ಅಭಿವೃದ್ಧಿಗೆ ಬಳಕೆ ಮಾಡುತ್ತಿದ್ದಾರೆ.ಇದು ಅವರ ನಿಸ್ವಾರ್ಥ ಸೇವೆ ಎಂದರು.
ಸಂತಜಾರ್ಜ್ ವಿದ್ಯಾಸಂಸ್ಥೆಗಳ ಆಡಳಿತ ಸಮಿತಿ ಅಧ್ಯಕ್ಷ ಬಿಷಪ್ ಮಾರ್ಕೋಸ್ ಮೋರ್ ಕ್ರಿಸೋಸ್ಟಮಸ್‌ರವರು ಆಶೀರ್ವಚನ ನೀಡಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ವೆ|ರೆ|ಜಾನ್ ವರ್ಗೀಸ್ ಕೋರ್ ಎಪಿಸ್ಕೋಪ ಅಧ್ಯಕ್ಷತೆ ವಹಿಸಿದ್ದರು.ಸಂಸ್ಥೆಯ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಇಸ್ಮಾಯಿಲ್‌ರವರು ಶುಭಹಾರೈಸಿದರು.ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಲಿಯಾಸ್ ಎಂ.ಕೆ, ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪೂರ್ವ ವಿದ್ಯಾರ್ಥಿಗಳು, ಕಾಲೇಜಿನ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.

ಹಾಜಬ್ಬರಿಂದ ಸನ್ಮಾನ
ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಅಧ್ಯಕ್ಷ ಬಿಷಪ್ ಮಾರ್ಕೋಸ್ ಮೋರ್ ಕ್ರಿಸೋಸ್ಟಮಸ್, ಸಂಚಾಲಕ ಅಬ್ರಹಾಂ ವರ್ಗೀಸ್ ಹಾಗೂ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್‌ರವರನ್ನು ಅಕ್ಷರ ಸಂತ ಹಾಜಬ್ಬರವರು ಈ ಸಂದರ್ಭದಲ್ಲಿ ಸನ್ಮಾನಿಸಿದರು.

75ನೇ ವಸಂತಕ್ಕೆ ಕಾಲಿಟ್ಟ ಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್‌ರವರ ಹುಟ್ಟುಹಬ್ಬವನ್ನು ಈ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಆಚರಿಸಲಾಯಿತು.

ಬಹುಮಾನ ವಿತರಣೆ:
ವಿದ್ಯಾರ್ಥಿಗಳಿಗೆ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ಶಿಕ್ಷಕಿ ಭವ್ಯ, ದೈಹಿಕ ಶಿಕ್ಷಣ ನಿರ್ದೇಶಕ ಮಹಮ್ಮದ್ ಹ್ಯಾರಿಸ್‌ರವರು ವಿಜೇತರ ಪಟ್ಟಿ ವಾಚಿಸಿದರು. ಸಂಸ್ಥೆಯ ಪ್ರೌಢಶಾಲಾ ಕನ್ನಡ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ತೋಮಸ್ ಎಂ.ಐ.ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಆಂಗ್ಲಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಹರಿಪ್ರಸಾದ್ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.,ಕಾರ್ಯಕ್ರಮ ನಿರೂಪಿಸಿದರು.

—ಜಾಹೀರಾತು—

Leave a Reply

error: Content is protected !!