ಮಹಿಳೆಯ ಬ್ಯಾಗ್‌ನಿಂದ ಚಿನ್ನಾಭರಣ ಕಳವು: ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಉಪ್ಪಿನಂಗಡಿ ಪೊಲೀಸರು

ಶೇರ್ ಮಾಡಿ

ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಕಳೆದ ಸೋಮವಾರ ಮಹಿಳೆಯೋರ್ವರ ಬ್ಯಾಗಿನಿಂದ 114 ಗ್ರಾಂ ತೂಕದ ಚಿನ್ನಾಭರಣದ ಬಾಕ್ಸ್ ಅನ್ನು ಎಗರಿಸಿದ್ದ ಪ್ರಕರಣವನ್ನು ಭೇದಿಸಿರುವ ಉಪ್ಪಿನಂಗಡಿ ಪೊಲೀಸರು ಆರೋಪಿತೆಯನ್ನು ಬಂದಿಸಿದ್ದಾರೆ. ಬಂಟ್ವಾಳ ತಾಲೂಕು ಕೊಮಿನಡ್ಕ ಮನೆ ನಿವಾಸಿ ನಸೀಮಾ (31 ವ.) ಬಂಧಿತ ಆರೋಪಿ ಕಳವಿಗೀಡಾದ ಎಲ್ಲಾ ಚಿನ್ನಾಭರಣವನ್ನು ಆಕೆಯಿಂದ ವಶಪಡಿಸಿಕೊಂಡಿದ್ದಾರೆ.

ಕಡಬ ತಾಲೂಕು ಬಂಟ್ರ ಗ್ರಾಮದ ನೆಕ್ಕಿತ್ತಡ್ಕ ಮನೆ ನಿವಾಸಿ ಮುಸ್ತಾಫ ಎಂಬವರ ಪತ್ನಿ ಅಬೀಬಾ ಎಂಬವರು ಅವರ ಬಾವನ ಹೆಂಡತಿ ಹಸೀರಾಬಾನು ಎಂಬವರೊಂದಿಗೆ ಜ.6ರಂದು ಪೆರ್ನೆಯಲ್ಲಿರುವ ಎ.ಎಂ.ಅಡಿಟೋರಿಯಂ ಹಾಲ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೊರಡುವ ಸಮಯ ಭದ್ರತೆಯ ದೃಷ್ಠಿಯಿಂದ ಮನೆಯಲ್ಲಿದ್ದ ಅವರ ಸುಮಾರು 8 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಮತ್ತು ಹಸೀರಾಬಾನು ಅವರ ಸುಮಾರು 106 ಗ್ರಾಂ ತೂಕದ ಚಿನ್ನಾಭರಣವನ್ನು ಒಂದು ಬಾಕ್ಸ್ ನೊಳಗಡೆ ಹಾಕಿ ವ್ಯಾನಿಟಿ ಬ್ಯಾಗಿನೊಳಗಡೆ ಇಟ್ಟುಕೊಂಡು, ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸು ಮನೆಗೆ ಹೋಗಲು ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಕಡಬಕ್ಕೆ ಹೋಗಲು ಮಧ್ಯಾಹ್ನ ಗಂಟೆ 1.45 ರ ಸುಮಾರಿಗೆ ಕಡಬಕ್ಕೆ ಹೋಗುವ ಕೆಎಸ್ಸಾರ್ಟಿಸಿ ಬಸ್ಸಿಗೆ ಹತ್ತಿ, ಬ್ಯಾಗ್‌ನಿಂದ ಐಡಿ ಕಾರ್ಡ್ ತೆಗೆಯಲೆಂದು ನೋಡಿದಾಗ ವ್ಯಾನಿಟಿ ಬ್ಯಾಗಿನ ಜಿಪ್ ತೆರೆದಿರುವುದು ಕಂಡು ಬಂದಿತ್ತು. ಈ ಸಂದರ್ಭ ಪರಿಶೀಲಿಸಿದಾಗ ಅದರೊಳಗಡೆ ಚಿನ್ನ ಇಟ್ಟಿದ್ದ ಬಾಕ್ಸ್ ಕಳವಿಗೀಡಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಪ್ರಕರಣದಲ್ಲಿ ಮಹತ್ವದ ಸುಳಿವನ್ನು ಸಂಪಾದಿಸಿಕೊಂಡು ಬೆನ್ನಟ್ಟಿ, ಬ್ಯಾಗ್ ಕಳ್ಳತನವನ್ನೇ ಕಸುಬಾಗಿಸಿಕೊಂಡ ನಸೀಮಾ ಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನದ ಕೃತ್ಯವನ್ನು ಒಪ್ಪಿಕೊಂಡು ತನ್ನ ಸ್ಕೂಟಿಯಲ್ಲಿ ಅಡಗಿಸಿಟ್ಟಿದ್ದ ಎಲ್ಲಾ ಚಿನ್ನಾಭರಣವನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾಳೆ.

ಈಕೆ ಮೂಲತಃ ಉಪ್ಪಿನಂಗಡಿ ಸಮೀಪದ 34 ನೇ ನೆಕ್ಕಿಲಾಡಿ ನಿವಾಸಿ. ಈಗಾಗಲೇ ಮೂರು ಮಂದಿಯನ್ನು ಮದುವೆಯಾಗಿ ನಾಲ್ವರು ಮಕ್ಕಳನ್ನು ಹೊಂದಿರುವ ಈಕೆಯ ಜೊತೆ ಯಾವೊಬ್ಬ ಗಂಡನೂ ಇಲ್ಲವೆನ್ನಲಾಗಿದೆ. ಆದ್ದರಿಂದ ಜೀವನೋಪಾಯಕ್ಕಾಗಿ ಕಳ್ಳತನವನ್ನೇ ಈಕೆ ಕಸುಬನ್ನಾಗಿಸಿಕೊಂಡಿದ್ದಾಳೆ. ಮಾತ್ರವಲ್ಲದೆ ಈಕೆ 2021 ರಿಂದ ಇಂತಹ ಹಲವಾರು ಕಳ್ಳತನದ ಕೃತ್ಯಗಳನ್ನು ನಡೆಸಿದ್ದರೂ ಯಾವುದೇ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗದಿದ್ದ ಕಾರಣ ನಿರಾತಂಕವಾಗಿ ಕಳ್ಳತನವನ್ನು ನಡೆಸಿಕೊಂಡಿದ್ದ ಆರೋಪವಿದೆ. ಉಪ್ಪಿನಂಗಡಿಯಲ್ಲಿನ ಕಳ್ಳತನದ ಕೃತ್ಯಕ್ಕಿಂತ ಮೊದಲು ಪುಂಜಾಲಕಟ್ಟೆಯಿಂದ ಬೆಳ್ತಂಗಡಿಗೆ ಹೋಗುವ ಬಸ್ಸಿನಲ್ಲಿ 8 ಗ್ರಾಮ್ ತೂಕದ ಚಿನ್ನಾಭರಣವನ್ನು ಎಗರಿಸಿದ್ದ ಈಕೆಯಿಂದ ಆ ಚಿನ್ನವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಸದ್ರಿ ಪ್ರಕರಣವು ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ ಎನ್ನಲಾಗಿದೆ. ಜ.6 ರಂದು ಉಪ್ಪಿನಂಗಡಿಯ ಬಟ್ಟೆ ಅಂಗಡಿಗೆ ಭೇಟಿ ನೀಡಿದ್ದ ಈಕೆ ಬಳಿಕ ಪುತ್ತೂರಿಗೆ ಹೋಗಿ ಉಪ್ಪಿನಂಗಡಿಗೆ ಹಿಂದಿರುಗಿದಾಗ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಮುಸ್ಲಿಂ ಮಹಿಳೆಯರ ಗುಂಪಿನಲ್ಲಿ ಸೇರಿಕೊಂಡು ಮೈತುಂಬಾ ಚಿನ್ನಾಭರಣವನ್ನು ಧರಿಸಿದ್ದ ಅಬೀಬಾ ರವರನ್ನು ಗುರುತಿಸಿ ಆಕೆ ಬಸ್ಸನ್ನೇರುತ್ತಿದ್ದಾಗ ಕೈ ಚಳಕ ತೋರಿ ಚಿನ್ನಾಭರಣವಿದ್ದ ಬಾಕ್ಸ್ ಎಗರಿಸಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳ್ಳತನದ ಚಿನ್ನಾಭರಣವನ್ನು ಹಣಕಾಸು ಸಂಸ್ಥೆಯಲ್ಲಿ ಅಡಮಾನವಿರಿಸಿ ಹಣ ಪಡೆಯುತ್ತಿದ್ದ ಈಕೆ ಪುಂಜಾಲಕಟ್ಟೆಯ ಕೆಲ ಸಹಕಾರಿ ಸಂಸ್ಥೆಗಳ ಗೌರವಾನ್ವಿತ ಗ್ರಾಹಕಳಾಗಿ ಗಮನ ಸೆಳೆದಿದ್ದಾಳೆ. ಪೊಲೀಸ್ ತನಿಖೆಯ ವೇಳೆ ಚಿನ್ನಾಭರಣ ಅಡಮಾನವಿರಿಸಿದ್ದ ಹಲವು ದಾಖಲೆಗಳು ಪತ್ತೆಯಾಗಿದ್ದು, ಜೊತೆಗೆ ಅಗಾಧ ಪ್ರಮಾಣದಲ್ಲಿ ಒನ್ ಗ್ರಾಮ್ ಗೋಲ್ಡ್ ಆಭರಣಗಳೂ ಪತ್ತೆಯಾಗಿದೆ. ಇದೆಲ್ಲವೂ ಪಿಕ್ ಪಾಕೆಟ್ ನಲ್ಲಿ ದೊರೆತ ಆಭರಣಗಳಾಗಿರುವ ಶಂಕೆ ವ್ಯಕ್ತವಾಗಿದೆ. ತನ್ನ ಬಹುತೇಕ ಕೃತ್ಯಗಳಲ್ಲಿ ಸಣ್ಣ ಪ್ರಮಾಣದ ಚಿನ್ನಾಭರಣಗಳು, ಲಭಿಸಿದ್ದರೂ ಹಲವು ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಕೆಯಾಗದೆ ಇರುವ ಕಾರಣ ಈಕೆಗೆ ಪೊಲೀಸರ ವಶಕ್ಕೆ ಒಳಗಾಗುವ ಭೀತಿಯೂ ಇರಲಿಲ್ಲ. ಮಾತ್ರವಲ್ಲದೆ ತಾನು ಧರಿಸುವ ಬುರ್ಖಾದಿಂದಾಗಿ ಸುಲಭದಲ್ಲಿ ತನ್ನ ಗುರುತು ಪತ್ತೆ ಅಸಾಧ್ಯ ಎಂಬ ದೃಢತೆ ಆಕೆಯಲ್ಲಿ ಇತ್ತೆನ್ನಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಪ್ಪಿನಂಗಡಿ ಪೊಲೀಸರಿಗೆ ಘಟನೆ ನಡೆದ ಸಮಯದಲ್ಲಿ ಸಿಸಿ ಕ್ಯಾಮರಾ ದೃಶ್ಯಾವಳಿಗಳಲ್ಲಿ ಇಪ್ಪತ್ತೈದಕ್ಕೂ ಹೆಚ್ಚಿನ ಬುರ್ಖಾಧಾರಿ ಮಹಿಳೆಯರು ಕಾಣಿಸಿದ್ದು, ಅದರಲ್ಲಿ ಸೇರಿಕೊಂಡಿದ್ದ ಕಳ್ಳಿಯನ್ನು ಗುರುತಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಈ ಸವಾಲನ್ನು ಸ್ವೀಕರಿಸಿದ ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಮತ್ತು ಉಪ ನಿರೀಕ್ಷಕ ಅವಿನಾಶ್ ಅವರ ತಂಡ ಉಪ್ಪಿನಂಗಡಿ ಪೇಟೆಯಲ್ಲಿ ಅಳವಡಿಸಲಾಗಿದ್ದ ಗುಣಮಟ್ಟದ ಕ್ಯಾಮರಾವನ್ನು ಹೊಂದಿದ್ದ ಸಿಸಿ ಕ್ಯಾಮರಾದ ಸಹಾಯದಿಂದ ಕಳ್ಳಿಯನ್ನು ನಿಖರವಾಗಿ ಗುರುತಿಸಿದರು. ಉಪ್ಪಿನಂಗಡಿಯಲ್ಲಿ ಪಿಕ್ ಪಾಕೆಟ್ ಮಾಡಿ ಬೆಳ್ತಂಗಡಿ ಕಡೆಗೆ ಹೋಗುವ ಬಸ್ಸನ್ನೇರಿದ ಈಕೆ ಕಲ್ಲೇರಿಯಲ್ಲಿ ಇಳಿದು ಅಟೋ ರಿಕ್ಷಾವೊಂದರಲ್ಲಿ ಪಾಂಡವರಕಲ್ಲಿನತ್ತ ಸಂಚರಿಸಿದ್ದನ್ನು ಖಚಿತಪಡಿಸಿಕೊಂಡ ಪೊಲೀಸರು ನಸೀಮಾಳನ್ನು ವಶಪಡಿಸಿಕೊಂಡು ಆಕೆಯ ಬಳಿ ಇದ್ದ ಸೊತ್ತು ಸ್ವಾಧೀನಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆಯ ವೇಳೆ 2021 ರಿಂದಲೇ ಇಂತಹ ಕೃತ್ಯಗಳನ್ನು ನಡೆಸುತ್ತಿದ್ದ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಕವಿತಾ, ಹಿತೋಷ್, ನಾಗರಾಜ, ಮೋಹನ್, ಗಿರೀಶ್, ಹೇಮರಾಜ್, ದಿವಾಕರ ಭಾಗವಹಿಸಿದ್ದರು.

  •  

Leave a Reply

error: Content is protected !!