ಬಂಟ್ವಾಳ : ಟೋಲ್ ಹಣ ನೀಡಿಲ್ಲ ಎಂಬ ಕಾರಣಕ್ಕಾಗಿ ಟೋಲ್ ಸಿಬ್ಬಂದಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದ ಮೂಲಕ ಹರಿದಾಡುತ್ತಿದೆ.
ಇದು ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಎಂಬಲ್ಲಿರುವ ವಿವಾದಾತ್ಮಕ ಟೋಲ್ ಗೇಟ್ ನಲ್ಲಿ ನಡೆದ ಘಟನೆಯಾಗಿದ್ದು, ಈವರೆಗೆ ಸ್ಥಳೀಯ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಜ.17ರ ಶುಕ್ರವಾರ ಸಂಜೆ ವೇಳೆ ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಚಾಲಕ ಬ್ರಹ್ಮರಕೂಟ್ಲುನಲ್ಲಿರುವ ಟೋಲ್ ಗೇಟ್ ನಲ್ಲಿ ಹಣ ನೀಡಿಲ್ಲ ಎಂಬ ಕಾರಣಕ್ಕಾಗಿ ಟೋಲ್ ಸಿಬ್ಬಂದಿ ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ, ಲಾರಿ ಬಾಗಿಲು ತೆರೆದು ಆತನ ಕೈ ಹಿಡಿದು ಹೊರಗೆ ಎಳೆಯುತ್ತಿದ್ದಾನೆ. ಸಾಲದು ಎಂಬಂತೆ ಅವ್ಯಾಚ್ಚ ಶಬ್ದಗಳಿಂದ ಬೈದು ಲಾರಿಯನ್ನು ವಾಪಸ್ ಹಿಂದೆ ಕಳುಹಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೋಲ್ ಗೇಟ್ ಸಿಬ್ಬಂದಿಯ ರೌದ್ರಾವತಾರದ ವಿಡಿಯೋವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುವ ಇತರ ವಾಹನ ಸವಾರರು ತೆಗೆದು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ಕಳುಹಿಸಿದ್ದಾರೆ.
ಆದರೆ ಈವರೆಗೆ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಯಾವುದೇ ಕ್ರಮ ಆಗಿಲ್ಲ ಎನ್ನಲಾಗಿದೆ.
ವಿಧಾನಸಭಾಧ್ಯಕ್ಷ, ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.