ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಗುಂಡೇಟು

ಶೇರ್ ಮಾಡಿ

ಮಂಗಳೂರು: ಕೋಟೆಕಾರು ವ್ಯವಸಾಯ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ, ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ಮಂಗಳೂರಿನ ತಲಪಾಡಿ ಅಲಂಕಾರುಗುಡ್ಡದಲ್ಲಿ  ನಡೆದಿದೆ.

ಮೂವರು ಆರೋಪಿಗಳನ್ನು ತಮಿಳುನಾಡಿನ ಮಧುರೈನಲ್ಲಿ ಬಂಧಿಸಲಾಗಿತ್ತು. ಈ ಪೈಕಿ ಒಬ್ಬನಾದ ಕಣ್ಣನ್ ಮಣಿ ಎಂಬಾತನನ್ನು ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿತ್ತು.

ಮಂಗಳವಾರ ಸಂಜೆ, ಆರೋಪಿಗಳನ್ನು ಕರೆತಂದು ಸ್ಥಳ ತಪಾಸಣೆ ನಡೆಸುತ್ತಿದ್ದ ವೇಳೆ, ಕಣ್ಣನ್ ಮಣಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತ ಬಿಯರ್ ಬಾಟಲಿಯಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ.

ಈ ವೇಳೆ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಎಚ್ಚರಿಕೆ ನೀಡಿದರೂ ಆರೋಪಿ ಹಲ್ಲೆ ಮುಂದುವರಿಸಿದ್ದರಿಂದ, ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಈ ಘಟನೆಯಲ್ಲಿ ಉಳ್ಳಾಲ ಪಿಎಸ್ ಇನ್ಸ್‌ಪೆಕ್ಟರ್ ಬಾಲಕೃಷ್ಣ, ಸಿಸಿಬಿ ಘಟಕದ ಪಿಸಿ ಆಂಜನಪ್ಪ ಮತ್ತು ಉಳ್ಳಾಲ ಪಿಸಿ ನಿತಿನ್‌ ರವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಹಾಗೂ ಆರೋಪಿಯನ್ನು ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಉಳ್ಳಾಲ ಪಿಎಸ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗುತ್ತಿದೆ.

  •  

Leave a Reply

error: Content is protected !!