
ವಿಟ್ಲ: ಬೋಳಂತೂರಿನ ಉದ್ಯಮಿಯ ಮನೆಯಲ್ಲಿ ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲಾ ಪೊಲೀಸರು ಅಂತರಾಜ್ಯ ದರೋಡೆಕೋರ ಓರ್ವನ್ನು ಬಂಧಿಸಿ, ಕಾರು, ನಗದು ವಶಪಡಿಸಿಕೊಂಡ ಘಟನೆ ಗುರುವಾರ(ಜ.23) ನಡೆದಿದೆ.

ಕೇರಳದ ಕೊಲ್ಲಂ ಜಿಲ್ಲೆಯ ಅನಿಲ್ ಫರ್ನಾಂಡಿಸ್ (49) ಬಂಧಿತ ಆರೋಪಿ

ಅನಿಲ್ ಫರ್ನಾಂಡಿಸ್ ನನ್ನು ಬಂಧಿಸಿ ಕೃತ್ಯಕ್ಕೆ ಉಪಯೋಗಿಸಿದ ಎರ್ಟಿಗಾ ಕಾರು, 5 ಲಕ್ಷ ರೂ ನಗದು ಹಾಗೂ ಕೃತ್ಯ ನಡೆಸುವಾಗ ಕಾರಿಗೆ ಅಳವಡಿಸಿದ್ದ ನಕಲಿ ನಂಬರ್ ಪ್ಲೇಟ್ ಅನ್ನು ವಶಪಡಿಸಿಕೊಂಡಿದ್ದು, ಸ್ವಾಧೀನ ಪಡಿಸಿಕೊಂಡ ನಗದು ಹಾಗೂ ವಾಹನದ ಒಟ್ಟು ಮೌಲ್ಯ 11 ಲಕ್ಷ ರೂ. ಆಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರಕರಣದ ಉಳಿದ ಆರೋಪಿಗಳ ಪತ್ತೆಕಾರ್ಯ ನಡೆದಿದೆ.
ಜನವರಿ 30ರಂದು ರಾತ್ರಿ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ನಾರ್ಶಾ ಎಂಬಲ್ಲಿ ಉದ್ಯಮಿಯೊಬ್ಬರ ಮನೆಗೆ ಆರು ಜನ ಅಪರಿಚಿತರು ಅಧಿಕಾರಿಗಳೆಂದು ನಂಬಿಸಿ, ಮನೆ ಶೋಧ ನಡೆಸಿ, ಸುಮಾರು 30 ಲಕ್ಷ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದ ಘಟನೆ ನಡೆದಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಗೊಂಡಿತ್ತು. ಪೋಲಿಸ್ ಅಧೀಕ್ಷಕ ಯತೀಶ್.ಎನ್ ಅವರ ಆದೇಶದ ಮೇರೆಗೆ, ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತನಿಕ ತಂಡ ರಚಿಸಿ, ಅಪರಾಧಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು.





