
ಕೊಕ್ಕಡ: ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಭಕ್ತ ಮಹಾಜನರ ಸಹಕಾರದೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ 108 ಕಾಯಿ ಗಣಹೋಮ ಮತ್ತು ಮೂಡಪ್ಪ ಸೇವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಫೆ.2ರಂದು ನಡೆಯಲಿದೆ.

ಬೆಳಿಗ್ಗೆ 8 ರಿಂದ 108 ಕಾಯಿ ಗಣಹೋಮ ಮತ್ತು ಅಥರ್ವಶೀರ್ಷಾಭಿಷೇಕ, ಮಧ್ಯಾಹ್ನ 12.15ಕ್ಕೆ ಮಹಾಪೂಜೆ, 12.30ಕ್ಕೆ ಪಲ್ಲಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ರಿಂದ ಮೂಡಪ್ಪ ಸೇವೆ, ರಾತ್ರಿ 9ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8ರಿಂದ ಸಂಜೆ 5ರ ತನಕ ವಾಮನ್ ನಾಯಕ್ ಉಪ್ಪಿನಂಗಡಿ ಅವರ ನೇತೃತ್ವದಲ್ಲಿ ಆಸಕ್ತ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದೆ. ಸಂಜೆ 5ಗಂಟೆಯಿಂದ ಸುವರ್ಣ ನೃತ್ಯ ತಂಡ ಮಂಗಳೂರು ಇವರ ಸೇವಾರ್ಥ ಭರತನಾಟ್ಯ, 6ಗಂಟೆಯಿಂದ ಸೌತಡ್ಕ ಶಿಶುಮಂದಿರದ ಪುಟಾಣಿಗಳಿಂದ ಚಿಣ್ಣರ ಚಿಲಿಪಿಲಿ ನಡೆಯಲಿದೆ. ರಾತ್ರಿ 7 ಗಂಟೆಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನಗಂಧರ್ವ ಬಿರುದಾಂಕಿತ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9.30ರಿಂದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಅಭಿನಯಿಸುವ ತುಳು ಪೌರಾಣಿಕ ಮತ್ತು ಭಕ್ತಿ ಪ್ರಧಾನ ಸಾಮಾಜಿಕ ನಾಟಕ ‘ಕಲ್ಜಿಗದ ಮಾಯ್ಕಾರೆ ಪಂಜುರ್ಲಿ’ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.





