ಸ್ಟಾಲ್, ಕಸದ ಬುಟ್ಟಿ ಅಳವಡಿಕೆ ||ಸಿಬ್ಬಂದಿ ನಿಯೋಜನೆ


ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ. ಅದರಲ್ಲೂ ಪ್ರತಿ ವರ್ಷ ಮಹಾ ಶಿವರಾತ್ರಿ ಆಚರಿಸಲು ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಲಕ್ಷಾಂತರ ಭಕ್ತರು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುತ್ತಾರೆ.


ಪ್ರತಿ ವರ್ಷವೂ ನಡೆದುಕೊಂಡು ಬರುತ್ತಿರುವ ಪರಂಪರೆಯಾಗಿದೆ. ಆಗಮಿಸುವ ಪಾದಯಾತ್ರಿಗಳ ಅನುಕೂಲಕ್ಕಾಗಿ ಅರಣ್ಯ ಇಲಾಖೆಯ ವತಿಯಿಂದ ಮಂಗಳೂರು ಅರಣ್ಯ ವಿಭಾಗದವರಿಂದ ಪರಿಸರ ಸ್ವಚ್ಛತೆ ಸೇರಿದಂತೆ ಭಕ್ತರು ಜಾಗೃತರಾಗಿರುವ ಮೂಲಕ ಸುರಕ್ಷಿತ ಮತ್ತು ಸುಗಮ ಯಾತ್ರೆಗಾಗಿ ಸಕಾಲ ಸುಸಜ್ಜಿತವಾದ ವ್ಯವಸ್ಥೆಯನ್ನು ಮಾಡಲಾಗಿದೆ.

ಮಂಗಳೂರು ಅರಣ್ಯ ವಿಭಾಗದಿಂದ ಸುಬ್ರಹ್ಮಣ್ಯ ವಲಯ, ಪಂಜ ವಲಯ ಹಾಗೂ ಉಪ್ಪಿನಂಗಡಿ ವಲಯದವರು ಧರ್ಮಸ್ಥಳಕ್ಕೆ ಬರುವ ಪಾದಯಾತ್ರೆಗಳಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಪರಿಸರದ ರಸ್ತೆ ಬದಿ ಗಿಡಗಂಟಿ, ತ್ಯಾಜ್ಯ ತೆರವುಗೊಳಿಸಿ ಸುಗಮವಾಗಿ ಸಾಗಲು ವ್ಯವಸ್ಥೆ ಕಲ್ಪಿಸಿ. ಬೆಂಕಿ ಅನಾಹುತ ಉಂಟಾಗದಂತೆ ಬೆಂಕಿ ರೇಖೆ ರಚಿಸಲಾಗಿದೆ. ಅಲ್ಲಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಪಾದಯಾತ್ರಿಕರ ಸೇವೆಗೆ ತಂಡ ಸಿದ್ಧವಾಗುತ್ತಿವೆ. ಪಾದಯಾತ್ರಿಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಕಳೆದ ಹತ್ತಾರು ದಿನಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ತಂಡಗಳು ಹೊರಟಿವೆ. ಹೆಚ್ಚಿನ ಸಂಖ್ಯೆಯ ಪಾದಯಾತ್ರಿಕರು ಭಾನುವಾರ, ಸೋಮವಾರ, ಮಂಗಳವಾರದಂದು ಬರಲಿದ್ದಾರೆ. ಪಾದಯಾತ್ರೆ ತಂಡಗಳ ವ್ಯವಸ್ಥಾಪಕರು ಅಡುಗೆ, ಇನ್ನಿತರ ವ್ಯವಸ್ಥೆಗಳ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಕೆಲವು ತಂಡಗಳು ಧರ್ಮಸ್ಥಳ ತಲುಪಿವೆ. ಬುಧವಾರ ಶಿವರಾತ್ರಿ ಆಚರಣೆ ಇರುವುದರಿಂದ ಅಂದು ಶ್ರೀ ಕ್ಷೇತ್ರದಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಳ್ಳಲಿದ್ದಾರೆ.

ಮುನ್ನೆಚ್ಚರಿಕೆಗಾಗಿ ಸ್ಟಾಲ್ ಗಳ ನಿರ್ಮಾಣ :
ಉಪ್ಪಿನಂಗಡಿ ವಲಯದವರು ಗುಂಡ್ಯದ ಗಡಿ, ಗುಂಡ್ಯದ ಚೆಕ್ ಪೋಸ್ಟ್ ಬಳಿ, ಅಡ್ಡಹೊಳೆ, ಉದನೆ, ಪೆರಿಯಶಾಂತಿ, ಪಾರ್ಪಿಕಲ್ಲು ಬೂಡುಜಾಲು ಹಾಗೂ ಪಂಜ ವಲಯದವರು ಇಚಿಲಂಪಾಡಿ, ಪೆರಿಯಶಾಂತಿಯ ಬಳಿ ಸ್ಟಾಲ್ ಗಳನ್ನು ನಿರ್ಮಿಸಿ
ಯಾತ್ರಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಾರ್ಗದರ್ಶನ ನೀಡಲು, ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆಯ ಕ್ರಮಕ್ಕಾಗಿ ಅರಣ್ಯ ಇಲಾಖೆಯ ಒಂದೊಂದು ಸ್ಟಾಲ್ ಗಳಲ್ಲಿ ಮೂರರಿಂದ ನಾಲ್ಕು ಸಿಬ್ಬಂದಿಗಳು ರಾತ್ರಿ ಹಗಲು ಕಾರ್ಯನಿರ್ವಹಿಸಲಿದ್ದಾರೆ.
ಭಕ್ತಾದಿಗಳು ಭಕ್ತಿಯಿಂದ ದೇವರ ಆಶೀರ್ವಾದಕ್ಕಾಗಿ ಬರುತ್ತಿದ್ದಾರೆ. ಕಾಡು ಸಹಿತ ಪ್ರಕೃತಿ ಮಾತೆ ಅದನ್ನು ಸ್ವಚ್ಛವಾಗಿ ಇಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗೂ ಆದ್ಯತೆ ಕೂಡ. ಅಲ್ಲಲ್ಲಿ ಕಸದ ಬುಟ್ಟಿಗಳ ವ್ಯವಸ್ಥೆ ಮಾಡಲಾಗಿದೆ, ಅದನ್ನು ಬಳಸಿಕೊಂಡು ಸ್ವಚ್ಛತೆಯನ್ನು ಕಾಪಾಡಬೇಕಾಗಿದೆ.
-ರಾಘವೇಂದ್ರ ಹೆಚ್.ಪಿ, ವಲಯ ಅರಣ್ಯಾಧಿಕಾರಿ, ಉಪ್ಪಿನಂಗಡಿ ವಲಯ
ಪಾದಯಾತ್ರೆಗಳು ದಾರಿಯುವುದಕ್ಕೂ ಸ್ವಚ್ಛತೆಯನ್ನು ಕಾಪಾಡಿಕೊಂಡು ಸಂಯಮದಿಂದ ತುರ್ತು ಸಂದರ್ಭದಲ್ಲಿ ನಿಯೋಜನೆಗೊಂಡ ಅರಣ್ಯ ಸಿಬ್ಬಂದಿಗಳ ಸಹಕಾರವನ್ನು ಪಡೆದುಕೊಳ್ಳಬಹುದಾಗಿದೆ.
-ಸಂಧ್ಯಾ, ವಲಯ ಅರಣ್ಯಾಧಿಕಾರಿ, ಪಂಜ ವಲಯ





