

ಕೊಕ್ಕಡ: ಸರಕಾರಿ ಪ್ರೌಢಶಾಲೆ ಕೊಕ್ಕಡದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಕುರಿತು ವಿಶೇಷ ಕಾರ್ಯಗಾರ ಮಾ.11ರಂದು ಆಯೋಜಿಸಲಾಯಿತು. ವಿದ್ಯಾರ್ಥಿಗಳ ಪಠ್ಯಗ್ರಹಣವನ್ನು ಸುಲಭಗೊಳಿಸುವ ಹಾಗೂ ವಿಜ್ಞಾನ ವಿಷಯದ ಮೇಲೆ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಗಾರವನ್ನು ನಡೆಸಲಾಯಿತು.

ಕಾರ್ಯಗಾರದಲ್ಲಿ ಕೊಕ್ಕಡ ಸ. ಪ್ರೌ. ಶಾ. ವಿಜ್ಞಾನ ಶಿಕ್ಷಕಿ ಶ್ರೀಮತಿ ರೂಪಾ ಮತ್ತು ಅರಸಿನಮಕ್ಕಿ ಸ. ಪ್ರೌ. ಶಾ.ವಿಜ್ಞಾನ ಶಿಕ್ಷಕಿ ಶ್ರೀಮತಿ ಚೇತನಾ ಸಂಪನ್ಮೂಲ ಶಿಕ್ಷಕರಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಸಿದ್ಧಾಂತಾತ್ಮಕ ಜ್ಞಾನವನ್ನು ಒದಗಿಸಿದರು. ವಿಜ್ಞಾನ ವಿಷಯದ ಪ್ರಮುಖ ಅಂಶಗಳು, ಪರೀಕ್ಷೆಯ ತಯಾರಿ ತಂತ್ರಗಳು ಮತ್ತು ಪ್ರಾಯೋಗಿಕ ಅಧ್ಯಯನದ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟತೆ ನೀಡಿದರು.

ಕಾರ್ಯಕ್ರಮವನ್ನು ಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ ರೀನಾರವರು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅವರು ವಿಜ್ಞಾನ ಅಧ್ಯಯನದ ಮಹತ್ವವನ್ನು ವಿವರಿಸುತ್ತಾ, ಈ ತರಗತಿಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಸಹಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀಮತಿ ನೇತ್ರವತಿ ಸ್ವಾಗತಿಸಿದರು. ಶ್ರೀಮತಿ ದೀಪಿಕಾ ವಂದಿಸಿದರು. ಶಾಲೆಯ ಎಲ್ಲ ಶಿಕ್ಷಕರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ, ಕಾರ್ಯಗಾರವನ್ನು ಯಶಸ್ವಿಯಾಗಿಸಿದರು.





