ಕೊಕ್ಕಡ ಗ್ರಾಮ ಸಭೆ: ಅಭಿವೃದ್ಧಿ ಕಾರ್ಯಗಳು ಮತ್ತು ಸಮಸ್ಯೆಗಳ ಕುರಿತು ವಿವಾದಾತ್ಮಕ ಚರ್ಚೆ

ಶೇರ್ ಮಾಡಿ

ಕೊಕ್ಕಡ: ಕೊಕ್ಕಡ ಗ್ರಾಮ ಪಂಚಾಯತಿನ 2024-25ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಅವರ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಭವನದಲ್ಲಿ ಮಾ.12ರಂದು ಜರುಗಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ್ ಅವರು ಮಾರ್ಗದರ್ಶಕ ಅಧಿಕಾರಿಯಾಗಿ ಭಾಗವಹಿಸಿದರು.

ಗ್ರಾಮ ಸಭೆಯಲ್ಲಿ ಆರೋಗ್ಯ, ಶಿಕ್ಷಣ, ನೀರು ಸರಬರಾಜು, ರಸ್ತೆ ಮತ್ತು ಸಾರ್ವಜನಿಕ ಸೇವೆಗಳ ಬಗ್ಗೆ ಚರ್ಚೆ ನಡೆಯಿತು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಸ್ವಾಗತಿಸಿ ವರದಿ ವಾಚಿಸಿದರು. ಕಾರ್ಯದರ್ಶಿ ಶ್ರೀಮತಿ ಭಾರತಿ ವಿತ್ತೀಯ ವಿವರಗಳನ್ನು ವಾಚಿಸಿದರು.

ಆರೋಗ್ಯ ಮತ್ತು ಶಿಕ್ಷಣ:
ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ವೈದ್ಯಾಧಿಕಾರಿ ಡಾ.ತುಷಾರ ಅವರು, 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯಾವುದೇ ಕಾರ್ಡ್ ಇಲ್ಲದೇ ಉಚಿತ ಚಿಕಿತ್ಸೆಯನ್ನು ನೀಡಲು ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು. ಶಿಕ್ಷಣ ಇಲಾಖೆಯ ವಿಲ್ಫ್ರೆಡ್ ಪಿಂಟೋ ಅವರು, ಮುಂದಿನ ಶೈಕ್ಷಣಿಕ ವರ್ಷದಿಂದ ಕೊಕ್ಕಡ ಸರಕಾರಿ ಶಾಲೆಯಲ್ಲಿ ಎಲ್‌ಕೆಜಿ ಪ್ರಾರಂಭವಾಗಲಿದೆ ಎಂದು ಘೋಷಿಸಿದರು.

ಜಲಜೀವನ್ ಯೋಜನೆ ಮತ್ತು ರಸ್ತೆ ಸಮಸ್ಯೆ:
ಗ್ರಾಮಸ್ಥರು ಜಲಜೀವನ್ ಯೋಜನೆಯ ಅಸಮರ್ಪಕ ಕಾರ್ಯದಾನ ಕುರಿತು ಪ್ರಶ್ನೆ ಸಿದರು. ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಪ್ರತ್ಯುತ್ತರವಾಗಿ, ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು. ಗ್ರಾಮ ಪಂಚಾಯತಿ ಸದಸ್ಯ ಯೋಗೀಶ್ ಆಳಂಬಿಲ ಅವರು ಕೊಕ್ಕಡದ ಪ್ರಮುಖ ರಸ್ತೆಗಳನ್ನು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಸೇರಿಸಲು ಪ್ರಸ್ತಾಪಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನೆಟ್ವರ್ಕ್ ಸಮಸ್ಯೆ:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಕುರಿತು ಚರ್ಚೆ ನಡೆಯಿತು. ಗ್ರಾಮಸ್ಥರಾದ ವಿಠ್ಠಲ್ ಅವರು ಮೈಪಾಲ ಸೇತುವೆ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಮತ್ತು ಬೀದಿ ದೀಪಗಳ ಕೊರತೆ ಬಗ್ಗೆ ಗಮನ ಸೆಳೆದರು. ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದವು.

ಭೂಸ್ವತ್ತು ಮತ್ತು ಪಿಡಬ್ಲ್ಯೂಡಿ ಸಮಸ್ಯೆ:
ಗ್ರಾಮ ಲೆಕ್ಕಾಧಿಕಾರಿ ತೇಜಸ್ವಿನಿ ಅವರಿಗೆ ಸರ್ವೇ ನಂ. 182ರ 94ಸಿ ಹಕ್ಕುಪತ್ರ ಹೊಂದಿರುವ ನಿವಾಸಿಗಳಿಗೆ ಆರ್‌ಟಿಸಿಯನ್ನು ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ತೇಜಸ್ವಿನಿ ಅವರು ಈ ಬಗ್ಗೆ ಮಾಹಿತಿ ಪಡೆದು ತಹಸೀಲ್ದಾರ್ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಗ್ರಾಮಸಭೆಯಲ್ಲಿ ಉದ್ವಿಗ್ನ ಕ್ಷಣಗಳು:
ಗ್ರಾಮಸ್ಥರು, ಪಂಚಾಯತಿ ಆಡಳಿತದ ತಾರತಮ್ಯ, ಜನಪ್ರತಿನಿಧಿಗಳ ಪ್ರಾಮಾಣಿಕತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎದುರಿಸಿದರು. ಇದರಿಂದ ಕೆಲವೆಡೆ ಮಾತಿನ ಚಕಮಕಿ ಉಂಟಾದರೂ, ಗ್ರಾಮಸ್ಥರು ಶಾಂತಿ ಪೂರ್ವಕವಾಗಿ ಸಭೆಯನ್ನು ಮುಕ್ತಾಯಗೊಳಿಸಿದರು.

ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಉಪಾಧ್ಯಕ್ಷ ಪ್ರಭಾಕರ ಗೌಡ, ಗ್ರಾಮ ಪಂಚಾಯತಿ ಸದಸ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

  •  

Leave a Reply

error: Content is protected !!