


ಕೊಕ್ಕಡ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಕೊಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಕಳೆದ ಮಳೆಗಾಲದಲ್ಲಿ ಗುಡ್ಡ ಜರಿದು ಬಿದ್ದು, ದೇವಸ್ಥಾನದ ಸುತ್ತು ಗೋಪುರಕ್ಕೆ ಹಾನಿ ಉಂಟಾಗಿತ್ತು. ಜೊತೆಗೆ ಗರ್ಭಗುಡಿಯವರೆಗೂ ಮಣ್ಣು ತುಂಬಿ, ಭಕ್ತರು ಹಾಗೂ ಗ್ರಾಮಸ್ಥರಲ್ಲಿ ಭಯ ಮತ್ತು ಆತಂಕ ಮೂಡಿಸಿತ್ತು.

ಈ ಬಗ್ಗೆ ಸ್ಥಳೀಯರು ಶಾಸಕರ ಗಮನಕ್ಕೆ ತಂದಾಗ, ಶಾಸಕ ಹರೀಶ್ ಪೂಂಜಾ ದೇವಸ್ಥಾನಕ್ಕೆ ಭೇಟಿ ನೀಡಿ, ಮಣ್ಣು ತೆರವು ಮಾಡುವ ಭರವಸೆ ನೀಡಿದ್ದರು. ಇದೀಗ ಅವರ ಸೂಚನೆಯಂತೆ ಗುತ್ತಿಗೆದಾರ ದಿಶಾಂತ ಕುಮಾರ್ ನೇತೃತ್ವದಲ್ಲಿ ಮಣ್ಣು ತೆರವು ಕಾರ್ಯ ಆರಂಭಗೊಂಡಿದೆ.
ಈ ಕಾರ್ಯದ ಚಾಲನೆ ನೀಡಿದ ಸಂದರ್ಭದಲ್ಲಿ ಅರಿಸಿನಮಕ್ಕಿ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ನವೀನ್ ರೆಖ್ಯ, ದೇವಸ್ಥಾನ ಸಮಿತಿಯ ಪ್ರಮುಖರಾದ ಲಕ್ಷ್ಮಣ ಗೌಡ ಕನ್ನಯಂಡ, ರವಿಂದ್ರ ಗೌಡ ಕೊಲಾರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಸ್ಥಳೀಯ ಭಕ್ತರು ಹಾಗೂ ಗ್ರಾಮಸ್ಥರು ಶಾಸಕರ ತ್ವರಿತ ಸ್ಪಂದನೆ ಮತ್ತು ಅಧಿಕಾರಿಗಳ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿ, ಮಣ್ಣು ತೆರವು ಕಾರ್ಯದಿಂದ ದೇವಸ್ಥಾನಕ್ಕೆ ಮರಳಿ ಸಹಜ ಸ್ಥಿತಿ ಬಂದೊದಗಲಿದೆ ಎಂದು ತಿಳಿಸಿದ್ದಾರೆ.





