


ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್, 286 ದಿನಗಳ ಬಾಹ್ಯಾಕಾಶ ವಾಸದ ನಂತರ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಈ ಅವಧಿಯಲ್ಲಿ ಅವರು 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ನಡೆಸುವ ಮೂಲಕ ಸುದೀರ್ಘ ಬಾಹ್ಯಾಕಾಶ ನಡಿಗೆ ನಡೆಸಿದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರಿಂದಾಗಿ ಅವರು ಒಟ್ಟು ಬಾಹ್ಯಾಕಾಶ ನಡಿಗೆಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ.
ಇದು ಮಾತ್ರವಲ್ಲದೆ, ಬಾಹ್ಯಾಕಾಶದಲ್ಲಿ ದೀರ್ಘಾವಧಿ ವಾಸ ಮಾಡಿದ ಎರಡನೇ ಗಗನಯಾತ್ರಿ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಸುನಿತಾ ಒಟ್ಟಾರೆ 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದು, ಈ ಪಟ್ಟಿಯಲ್ಲಿ ಅಮೆರಿಕದ ಪೆಗ್ಗಿ ವಿಟ್ಸನ್ ಮೊದಲ ಸ್ಥಾನದಲ್ಲಿದ್ದಾರೆ. ಪೆಗ್ಗಿ ಒಟ್ಟು 675 ದಿನಗಳ ಬಾಹ್ಯಾಕಾಶ ವಾಸ ಸಾಧಿಸಿದ್ದಾರೆ.
2024ರ ಜೂನ್ 6ರಂದು, ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್, 8 ದಿನಗಳ ಕಾರ್ಯಾಚರಣೆಗಾಗಿ ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ, ಬಾಹ್ಯಾಕಾಶ ನೌಕೆಯ ತಾಂತ್ರಿಕ ದೋಷದಿಂದಾಗಿ, ಪ್ಲಾನ್ ಮಾಡಿದಂತೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, 286 ದಿನಗಳ ಕಾಲ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಯಲ್ಲಿ ನಿರ್ವಹಿಸಬೇಕಾಯಿತು.
ಈ ಅವಧಿಯಲ್ಲಿ ಅವರು ಭೂಮಿಯ ಸುತ್ತ 4,576 ಬಾರಿ ಕಕ್ಷೆ ಸಂಚರಿಸಿದ್ದಾರೆ ಮತ್ತು 12,13,47,491 ಮೈಲುಗಳಷ್ಟು ದೂರ ಪ್ರಯಾಣ ಮಾಡಿದ್ದಾರೆ. ಅವರ ಜೊತೆಗಿದ್ದ ವಿಲ್ಮೋರ್ ಒಟ್ಟು 464 ದಿನಗಳ ಬಾಹ್ಯಾಕಾಶ ವಾಸ ಪೂರೈಸಿದ್ದಾರೆ.
ಸುನಿತಾ ವಿಲಿಯಮ್ಸ್, ತಮ್ಮ ಮೂರು ಬಾಹ್ಯಾಕಾಶ ಯಾತ್ರೆಗಳ ಮೂಲಕ ನಾಸಾದ ಪ್ರಮುಖ ವಿಜ್ಞಾನಿ ಮತ್ತು ಸಂಶೋಧಕಿಯಾಗಿ ಗುರುತಿಸಿಕೊಂಡಿದ್ದಾರೆ. ಬಾಹ್ಯಾಕಾಶ ನೌಕೆಗಳ ಕಾರ್ಯಾಚರಣೆ, ತುರ್ತು ನಿರ್ವಹಣೆ ಮತ್ತು ಸುದೀರ್ಘ ಬಾಹ್ಯಾಕಾಶ ವಾಸ ಸಂಬಂಧಿತ ಸಂಶೋಧನೆಗಳಲ್ಲಿ ಅವರು ಮಹತ್ತರ ಪಾತ್ರ ವಹಿಸಿದ್ದಾರೆ.
ಭಾರತೀಯ ಮೂಲದ ಮಹಿಳೆಯಾಗಿ ಇಂತಹ ಮಹತ್ತರ ಸಾಧನೆ ಮಾಡಿರುವ ಸುನಿತಾ, ಜಗತ್ತಿನ ಗಮನ ಸೆಳೆದಿದ್ದು, ಬಾಹ್ಯಾಕಾಶ ವಿಜ್ಞಾನದಲ್ಲಿ ಮಹಿಳೆಯರ ಪಾತ್ರವನ್ನು ಮತ್ತಷ್ಟು ಉಜ್ವಲಗೊಳಿಸಿದ್ದಾರೆ!





