


ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್‌ಗೆ ಹೊಸ ಸಮಿತಿ ರಚಿಸುವಂತೆ ಆದೇಶ ನೀಡಿದೆ.

ಫೆಬ್ರವರಿ 18ರಂದು ಹೊಸ ಸಮಿತಿಗೆ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಬಳಿಕ ಹಿಂದೂ ಧಾರ್ಮಿಕ ದತ್ತಿ ಇಲಾಖೆಯು ಈ ಆದೇಶವನ್ನು ಬದಲಾಯಿಸಿ ಮರು ಆದೇಶ ನೀಡಿತ್ತು. ಈ ಹೊಸ ಆದೇಶದನ್ವಯ ಸಮಿತಿಗೆ ನೇಮಕಗೊಂಡ ಸಮಿತಿಗೆ ಸದಸ್ಯರಾಗಿ ಪರಿಶಿಷ್ಟ ಜಾತಿ ಸ್ಥಾನದಿಂದ ಹರಿಶ್ಚಂದ್ರ ಉಪ್ಪರಪಳಿಕೆ ಕೊಕ್ಕಡ, ಮಹಿಳಾ ಸ್ಥಾನದಿಂದ ಸಿನಿ ತಂಡಶೇರಿ ಕೊಕ್ಕಡ ಮತ್ತು ಲೋಕೇಶ್ವರಿ ವಿನಯಚಂದ್ರ ವಳಂಬ್ರ ಕಡಿರುದ್ಯಾವರ, ಸಾಮಾನ್ಯ ಸ್ಥಾನದಿಂದ ಗಣೇಶ್ ಕಾಶಿ ಕಾಶಿಹೌಸ್ ಕೊಕ್ಕಡ, ಸುಬ್ರಹ್ಮಣ್ಯ ಶಬರಾಯ ವಿಶ್ವಂಬರ ಮನೆ ಕೊಕ್ಕಡ, ವಿಶ್ವನಾಥ ಕೆ. ಕೊಲ್ಲಾಜೆ ಕೊಕ್ಕಡ, ಪ್ರಮೋದ್ ಕುಮಾರ್ ಶೆಟ್ಟಿ ಎಂತಿಮರ್ ರೆಖ್ಯ, ಪ್ರಶಾಂತ್ ಕುಮಾರ್ ಶಾಂತಿಜೆ ಮನೆ ಕೊಕ್ರಾಡಿ ಹಾಗೂ ಪ್ರಧಾನ ಅರ್ಚಕರು ಕೊಕ್ಕಡ ವ್ಯವಸ್ಥಾಪನಾ ಸಮಿತಿಗೆ ನೇಮಕಗೊಂಡಿದ್ದರು.

ಈ ಸಮಿತಿಯ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ ಕೆ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ದೇವಸ್ಥಾನದ ಆಡಳಿತಾಧಿಕಾರಿಯವರಿಂದ ನೂತನ ಸಮಿತಿಗೆ ಅಧಿಕಾರ ಹಸ್ತಾಂತರವೂ ನಡೆದಿತ್ತು.
ಆದರೆ, ಪ್ರಾರಂಭದಲ್ಲಿ ಆಯ್ಕೆಯಾದ ಪ್ರಶಾಂತ್ ರೈ ಅರಂತಬೈಲು ಗೋಳಿತೊಟ್ಟು ಮತ್ತು ಉದಯ ಶಂಕರ್ ಶೆಟ್ಟಿ ಅರಿಯಡ್ಕ ಮನೆ ಪುತ್ತೂರು ಅವರನ್ನು ಕೈಬಿಟ್ಟು ಹೊಸ ಎರಡು ಹೆಸರುಗಳನ್ನು ಸೇರಿಸಿ ಮರು ಆದೇಶ ಹೊರಡಿಸಲಾಗಿತ್ತು. ಈ ತಿದ್ದುಪಡಿಯ ವಿರುದ್ಧ ಉದಯ ಶಂಕರ್ ಶೆಟ್ಟಿ ಹೈಕೋರ್ಟ್‌ನಲ್ಲಿ ಅಪೀಲು ಸಲ್ಲಿಸಿದ್ದರು.
ಈ ವಿಚಾರವನ್ನು ಪರಿಶೀಲಿಸಿದ ನಂತರ, ಕರ್ನಾಟಕ ಹೈಕೋರ್ಟ್ ನೂತನ ಸಮಿತಿಯನ್ನು ರದ್ದುಗೊಳಿಸಿ, ಹೊಸ ಸಮಿತಿಯನ್ನು ರಚಿಸಲು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್‌ಗೆ ನಿರ್ದೇಶನ ನೀಡಿದೆ.



