

ಬೆಂಗಳೂರು: ಪಕ್ಷಶಿಸ್ತಿಗೆ ವಿರುದ್ಧವಾಗಿ ನಡೆದುಕೊಂಡ ಕಾರಣ ಹಾಗೂ ಶಿಸ್ತು ಸಮಿತಿಯ ಶೋಕಾಸ್ ನೋಟಿಸ್‌ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿದೆ. ಈ ನಿರ್ಧಾರ ತಕ್ಷಣವೇ ಜಾರಿಗೆ ಬಿದ್ದಿದ್ದು, ಬಿಜೆಪಿಯ ಭಿನ್ನಮತೀಯ ನಾಯಕತ್ವದ ಮೇಲೆ ಹೈಕಮಾಂಡ್ ಕಠಿಣ ಕ್ರಮ ಕೈಗೊಂಡಿದೆ.

ಬಿಜೆಪಿ ಶಿಸ್ತು ಸಮಿತಿಯು ಯತ್ನಾಳ್‌ಗೆ ಎರಡು ಬಾರಿ ಶೋಕಾಸ್ ನೋಟಿಸ್ ನೀಡಿತ್ತು. ಪಕ್ಷದ ಶಿಸ್ತು ಉಲ್ಲಂಘನೆ ಹಾಗೂ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರೂ, ಅವರು ನಿರಂತರವಾಗಿ ಪಕ್ಷದ ವಿರುದ್ಧ ಮಾತನಾಡುತ್ತಿದ್ದರೆಂದು ವರದಿಯಾಗಿದೆ. ಫೆಬ್ರವರಿ 10 ರಂದು ಯತ್ನಾಳ್ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿದ್ದರೂ, ಅವರ ಸ್ಪಷ್ಟೀಕರಣವನ್ನು ಕೇಂದ್ರ ಶಿಸ್ತು ಸಮಿತಿಯು ಅಂಗೀಕರಿಸದೆ, ಉಚ್ಛಾಟನೆ ಮಾಡಲು ನಿರ್ಧರಿಸಿದೆ.
ಯತ್ನಾಳ್ ನೇತೃತ್ವದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಠಾವೋ ಆಂದೋಲನ ಭಿನ್ನಮತೀಯರು ನಡೆಸುತ್ತಿದ್ದರು. ಪಕ್ಷದ ಮಹತ್ವದ ವಿಚಾರಗಳನ್ನು ಹೊರಗಡೆ ಚರ್ಚಿಸಬಾರದು ಎಂಬ ಸೂಚನೆ ನೀಡಿದ್ದರೂ, ನಿರಂತರವಾಗಿ ಬಿಜೆಪಿ ನಾಯಕರ ಕೆಲವು ಹೇಳಿಕೆಗಳು ಪಕ್ಷದ ಗುರಿಗಳ ವಿರುದ್ಧವಾಗಿದ್ದವು. ಇದರಿಂದಾಗಿ, ಹೈಕಮಾಂಡ್ ಶಿಸ್ತು ಉಲ್ಲಂಘನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಈ ನಿರ್ಧಾರ ಕೈಗೊಂಡಿದೆ.

ಇದೇ ಸಂದರ್ಭ, ಶಿಸ್ತು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಮಾರ್ಚ್ 25 ರಂದು ಎಸ್‌ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿಪಿ ಹರೀಶ್ ಹಾಗೂ ರೇಣುಕಾಚಾರ್ಯ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ ಭಿನ್ನಮತೀಯ ನಾಯಕರ ವಿರುದ್ಧ ಮುಂದುವರೆದಿರುವ ಕ್ರಮವು ಭವಿಷ್ಯದಲ್ಲಿ ಪಕ್ಷದ ಒಳಾಂಗಣ ರಾಜಕೀಯವನ್ನು ದೊಡ್ಡ ಮಟ್ಟದಲ್ಲಿ ಬದಲಾಯಿಸಬಹುದಾದ ಸೂಚನೆ ನೀಡುತ್ತಿದೆ.




