

ನೆಲ್ಯಾಡಿ: ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ದೀರ್ಘಕಾಲ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತರಾದ ನೆಲ್ಯಾಡಿಯ ಸೆಬಾಸ್ಟಿಯನ್-ತ್ರೇಸಿಯಾ ದಂಪತಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಅವರ ದೀರ್ಘಕಾಲಿಕ ಸೇವೆಯನ್ನು ಸ್ಮರಿಸಿ, ನುಡಿದಾನಿ ಮಾಡುವ ಜೊತೆಗೆ, ಅವರ ತ್ಯಾಗ ಮತ್ತು ಪರಿಶ್ರಮಕ್ಕೆ ಸಮುದಾಯದ ಭಾವುಕ ಗೌರವ ವ್ಯಕ್ತವಾಯಿತು.

ಸೆಬಾಸ್ಟಿಯನ್-ತ್ರೇಸಿಯಾ ದಂಪತಿಗಳು ಹಾನಗಲ್, ಬೆಳಗಾವಿ, ಬಿಜಾಪುರ, ಕಲಘಟಗಿ, ಹುಬ್ಬಳ್ಳಿ ಮೊದಲಾದ ವಿವಿಧ ಪ್ರದೇಶಗಳಲ್ಲಿ ಜನಸೇವೆಗೆ ಸಮರ್ಪಿತರಾಗಿ, ಜನಾರೋಗ್ಯ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ರಾಜ್ಯ ಆರೋಗ್ಯ ಮಂತ್ರಾಲಯದ ಪ್ರಧಾನ ಕಚೇರಿಯಿಂದ ಅವರು ನಿವೃತ್ತಿ ಹೊಂದಿದ್ದು, ಈ ಸಮಾರಂಭ ಅವರ ಅಮೂಲ್ಯ ಸೇವೆಗಾಗಿ ಕೃತಜ್ಞತೆ ಸಲ್ಲಿಸುವ ಹಾಗೂ ಅವರ ತ್ಯಾಗವನ್ನು ಗೌರವಿಸುವ ಮಹತ್ವದ ಕ್ಷಣವಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ಮತ್ತು ಆರ್ಲ ಸೆಂಟ್ ಮೇರಿಸ್ ಚರ್ಚ್ ನ ವಂ.ಫಾ.ಶಾಜಿ ಮಾತ್ಯು ಮಾತನಾಡಿ, “ಅವರ ಸೇವೆಯು ಅನೇಕ ಜೀವಗಳಿಗೆ ಬೆಳಕನ್ನು ತಂದಿದೆ. ಸಮುದಾಯದ ಆರೋಗ್ಯ ಸುಧಾರಿಸಲು ಅವರ ಪರಿಶ್ರಮ ಅಪ್ರತಿಮ. ಈ ಸನ್ಮಾನವು ಕೇವಲ ಗೌರವ ಸೂಚನೆಯಷ್ಟೇ ಅಲ್ಲ, ಭವಿಷ್ಯದಲ್ಲಿ ಹೊಸ ತಲೆಮಾರಿಗೆ ಪ್ರೇರಣೆಯಾಗಿ ಕಾರ್ಯನಿರ್ವಹಿಸಲು ಒಂದು ಮಾದರಿಯಾಗಿದೆ,” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ನೆಲ್ಯಾಡಿ ಸೆಂಟ್ ಅಲ್ಫೋನ್ಸ ವಾರ್ಡ್‌ನ ಅಧ್ಯಕ್ಷ ಜೋನ್ಸನ್ ಪುಳಿಕಲ್, ಕಾರ್ಯದರ್ಶಿ ಶ್ರೀಮತಿ ಎಲ್ಸಿ ಜೋಸ್ ಕಿಯಕ್ಕೆಲ್, ರೆವ. ಸಿಸ್ಟರ್ ಅಲೀಸ್, ಸ್ಥಳೀಯ ಗಣ್ಯರು ಹಾಗೂ ಸಮುದಾಯದ ಅನೇಕ ಸದಸ್ಯರು ಉಪಸ್ಥಿತರಿದ್ದರು.




