

ನೆಲ್ಯಾಡಿ: ಬಜತ್ತೂರು ಗ್ರಾಮದ ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 35 ವರ್ಷ ಕಾರ್ಯನಿರ್ವಹಣಾಧಿಕಾರಿಯಾಗಿದ್ದು ಮಾ.31ರಂದು ಸೇವಾ ನಿವೃತ್ತಿಯಾಗಲಿರುವ ಚಂದ್ರಶೇಖರ ಗೌಡರವರಿಗೆ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಾಗೂ ಸನ್ಮಾನ ಮಾ.28ರಂದು ಬೆಳಿಗ್ಗೆ ಸಂಘದ ವಠಾರದಲ್ಲಿ ನಡೆಯಿತು.
ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿಗಳ ಸೇವೆ ಅಮೂಲ್ಯವಾಗಿರುತ್ತದೆ. ಗುಣಮಟ್ಟದ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕಾಗುತ್ತದೆ. ಸರಳ ವ್ಯಕ್ತಿತ್ವದ ಚಂದ್ರಶೇಖರ ಅವರದ್ದು ಮಾತು ಕಡಿಮೆಯಾದರೂ ಸಂಘದ ಸದಸ್ಯರಿಗೆ ಒಳ್ಳೆಯ ಸರ್ವೀಸ್ ನೀಡಿದ್ದಾರೆ. ಹೊಸದಾಗಿ ಬರುವ ಕಾರ್ಯದರ್ಶಿಗಳೂ ಅವರ ಮಾದರಿಯಲ್ಲಿಯೇ ಕೆಲಸ ಮಾಡಬೇಕು. ಚಂದ್ರಶೇಖರ ಅವರ ನಿವೃತ್ತ ಜೀವನವು ಸುಖಮಯವಾಗಿರಲಿ ಎಂದರು.
ಸ್ಥಾಪಕಾಧ್ಯಕ್ಷ ಯಶವಂತ ಕೆಮ್ಮಾರ ಅವರು, “ಚಂದ್ರಶೇಖರರು 35 ವರ್ಷ ಸಂಘದಲ್ಲಿ ಕಾರ್ಯನಿರ್ವಹಿಸಿ ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡಿಲ್ಲ. 22 ಲೀ. ಹಾಲಿನಿಂದ ಪ್ರಾರಂಭವಾದ ಸಂಘ, ಇಂದು 1200 ಲೀ. ಹಾಲು ಸಂಗ್ರಹಿಸುತ್ತಿದ್ದು, ಇದು ಅವರ ಶ್ರಮದ ಫಲ,” ಎಂದರು.
ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ಜಿತೇಂದ್ರ ಪ್ರಸಾದ್‍ರವರು ಮಾತನಾಡಿ “ಚಂದ್ರಶೇಖರರು ಪ್ರಾಮಾಣಿಕತೆ ಮತ್ತು ಶ್ರಮದ ಮೂಲಕ ಸಂಘದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ದಾರೆ,” ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ ಗೌಡರು, “ಸಂಘವು ಹಲವು ಸವಾಲುಗಳನ್ನು ಎದುರಿಸಿ ಬೆಳೆದಿದ್ದು, ಹಾಲು ಉತ್ಪಾದಕರ ಮನೆಗಳಿಗೆ ಭೇಟಿ ನೀಡಿ, ಅವರನ್ನೂ ಪ್ರೋತ್ಸಾಹಿಸಿ, ಹಾಲು ಸಂಗ್ರಹ ಹೆಚ್ಚಿಸಲಾಗಿದೆ. ಸಂಘದ ಬೆಳವಣಿಗೆಯಲ್ಲಿ ನಾನು ಭಾಗಿಯಾಗಿರುವುದು ಸಂತೋಷ,” ಎಂದರು.
ಕಾರ್ಯಕ್ರಮದಲ್ಲಿ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್, ಸಂಘದ ಅಧ್ಯಕ್ಷ ಡೆನ್ನಿಸ್ ಪಿಂಟೊ ಪುಯಿಲ, ಮಾಜಿ ಅಧ್ಯಕ್ಷ ಶಿವರಾಮ ಕಾರಂತ ಉರಾಬೆ, ನಿವೃತ್ತ ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್, ಬಜತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಕುಸುಮಾವತಿ ಮುದ್ಯ, ಮನೋಹರ ಡಿ.ವಿ., ನಿವೃತ್ತ ಹಾಲು ಪರೀಕ್ಷಕ ಮ್ಯಾಕ್ಸಿಂ ಪೀಟರ್ ಪಿಂಟೋ, ಗಂಗಾಧರ ಗೌಡ, ಮುಕುಂದ ಗೌಡ, ಪ್ರತಾಪ್‍ಚಂದ್ರ ರೈ, ಮಂಜಪ್ಪ ಗೌಡ, ಸುಬ್ರಹ್ಮಣ್ಯ ಭಟ್, ಜಗದೀಶ್ ರಾವ್, ವಸಂತ ಗೌಡ, ಪದ್ಮಾವತಿ, ಅನುರಾಧಾ, ಲತಾಶ್ರೀ, ಹಾಲು ಉತ್ಪಾದಕರು ಹಾಗೂ ಹಿತೈಷಿಗಳು ಭಾಗವಹಿಸಿದ್ದರು.
ನಿರ್ದೇಶಕ ಉಮೇಶ್ ನೆಕ್ಕರೆ ಸ್ವಾಗತಿಸಿ, ನಿರ್ದೇಶಕ ಸುರೇಶ್ ಬಿದಿರಾಡಿ ವಂದಿಸಿದರು. ನಿರ್ದೇಶಕ ನಾರಾಯಣ ಕೆಳಗಿನಮನೆ ನಿರೂಪಿಸಿದರು. ಶರತ್ ಮುದ್ಯ ಪ್ರಾರ್ಥಿಸಿದರು.
ಸನ್ಮಾನ:
ಚಂದ್ರಶೇಖರ ಹಾಗೂ ಅವರ ಪತ್ನಿ ಗಿರಿಜಾ ಅವರನ್ನು ಚಿನ್ನದ ಉಂಗುರ, ಶಾಲು, ಪೇಟ, ಫಲತಾಂಬೂಲ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಉಪಾಧ್ಯಕ್ಷ ಶಶಿಧರ ಮುದ್ಯ ಸನ್ಮಾನಪತ್ರ ವಾಚಿಸಿದರು.






