

ರೆಂಜಿಲಾಡಿ: ಸಾಂತೋಮ್ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯು.ಕೆ.ಜಿ ಪುಟಾಣಿಗಳ ಪದವಿ ಪ್ರಧಾನ ಸಮಾರಂಭವು ವಿಜೃಂಭಣೆಯಿಂದ ಶನಿವಾರ ನಡೆದಿತು. ಪುಟಾಣಿಗಳು ತಮ್ಮ ಶಿಕ್ಷಣದ ಪ್ರಥಮ ಹಂತವನ್ನು ಪೂರ್ಣಗೊಳಿಸಿ ಪ್ರಾಥಮಿಕ ಶಿಕ್ಷಣದ ಹಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಮಹತ್ತರ ಕ್ಷಣವನ್ನು ಪೋಷಕರು, ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯವರು ಹರ್ಷಭಾವದಿಂದ ಆಚರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಲ್ ಎನ್.ಎ. ಮ್ಯಾಥ್ಯು ಭಾಗವಹಿಸಿ, ಮಕ್ಕಳ ಜೀವನದಲ್ಲಿ ಶಿಸ್ತು ಮತ್ತು ಮಾರ್ಗದರ್ಶನದ ಮಹತ್ವವನ್ನು ಒತ್ತಿಹೇಳಿದರು. “ಹೆತ್ತವರ ಪ್ರೀತಿಯಲ್ಲಿ ಬೆಳೆಯುವ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ದೊರೆತರೆ, ಅವರು ಯಶಸ್ವಿ ಜೀವನ ನಡೆಸಲು ಸಾಧ್ಯ. ಶಿಸ್ತು, ಸಹನಶೀಲತೆ ಮತ್ತು ಪ್ರಾಮಾಣಿಕತೆ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ” ಎಂದು ಅವರು ಮಕ್ಕಳಿಗೆ ಕಥೆಗಳ ಮೂಲಕ ವಿವರಿಸಿದರು.
ಸಂಸ್ಥೆಯ ಸಂಚಾಲಕರಾದ ರೇ. ಫಾ. ಪೌಲ್ ಜೇಕಬ್, ಅಧ್ಯಕ್ಷತೆಯನ್ನು ವಹಿಸಿ, ಯು.ಕೆ.ಜಿ ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. “ಮನೆ ಮತ್ತು ಶಾಲೆಯ ನಡುವಿನ ಬದಲಾವಣೆಯನ್ನು ಮಕ್ಕಳಿಗೆ ಹೊಂದಿಕೊಳ್ಳುವಂತೆ ಮಾಡಲು ಶಿಕ್ಷಕರ ಪಾತ್ರ ಅತಿ ಪ್ರಮುಖವಾಗಿದೆ. ಪುಟಾಣಿಗಳು ಪ್ರಾಥಮಿಕ ಶಿಕ್ಷಣವನ್ನು ಆರಂಭಿಸುತ್ತಿರುವ ಈ ಸಮಯವು ಎಲ್ಲರಿಗೂ ಹರ್ಷವಾಹಿಯಾಗಲಿ” ಎಂದು ಶುಭ ಹಾರೈಸಿದರು.
ಕರ್ನಲ್ ಎನ್.ಎ. ಮ್ಯಾಥ್ಯು ಅವರಿಂದ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಪದವಿ ಪ್ರಮಾಣಪತ್ರ ವಿತರಿಸಲಾಯಿತು. ಪುಟಾಣಿಗಳ ಸಾಧನೆಯು ಪೋಷಕರಲ್ಲಿ ಹೆಮ್ಮೆ ಹುಟ್ಟಿಸುವಂತಿತ್ತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಶೈಕ್ಷಣಿಕ ಸಲಹೆಗಾರರು ಹಾಗೂ ಆಡಳಿತಾಧಿಕಾರಿ T.G. ಮ್ಯಾಥ್ಯು, ಕೋಶಾಧಿಕಾರಿ ಸೈಮನ್ ಕೆ.ಸಿ, ಆಡಳಿತ ಮಂಡಳಿ ಸದಸ್ಯ ವಿನೋದ್, ರಕ್ಷಕ-ಶಿಕ್ಷಕ ಸಂಘದ ಸದಸ್ಯೆ ಶ್ರೀಮತಿ ಸಿಜಿ ಸ್ಕರಿಯಾ, ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಎಸ್.ಕೆ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.
ಶಿಕ್ಷಕಿ ಶ್ವೇತಾ ಸ್ವಾಗತಿಸಿ, ಶಿಕ್ಷಕಿ ಪ್ರಭಾವತಿ ವಂದಿಸಿದರು. ಶಿಕ್ಷಕಿ ಕ್ರಿಸ್ಟೀನಾ ಪಿ.ಕೆ ಕಾರ್ಯಕ್ರಮ ನಿರೂಪಿಸಿದರು.





