

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಅರಸಿನಮಕ್ಕಿಯಲ್ಲಿ ಮಕ್ಕಳಿಗೆ ಪರಿಸರ ಮತ್ತು ವಿಪತ್ತು ನಿರ್ವಹಣೆಯ ಕುರಿತು ಜಾಗೃತಿಯನ್ನು ಉಂಟುಮಾಡುವ ಉದ್ದೇಶದಿಂದ ಒಂದು ದಿನದ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು. ಈ ಶಿಬಿರವನ್ನು ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಇವರ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ, ಸಹ್ಯಾದ್ರಿ ಸಂಚಯದ ಕಾರ್ಯದರ್ಶಿ ಮತ್ತು ಪರಿಸರ ಪ್ರೇಮಿ ದಿನೇಶ್ ಹೊಳ್ಳ ಮಂಗಳೂರು ಅವರು ಮಕ್ಕಳಿಗೆ ಪೇಪರ್ ಕ್ರಾಫ್ಟ್, ಅಕ್ಷರ ವಿನ್ಯಾಸ, ಮಿಮಿಕ್ರಿ ಕಲಿಕೆ ಮತ್ತು ಆಟೋಟ ಸ್ಪರ್ಧೆಗಳ ಮೂಲಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಮಾಹಿತಿಯನ್ನು ರಂಜನೆಯೊಂದಿಗೆ ನೀಡಿದರು. ಅವರು ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ಮಹತ್ವ ಮತ್ತು ಅದರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರದ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು.
ಖ್ಯಾತ ಉರಗ ಸಂರಕ್ಷಕ ಸುರೇಶ್ ರಮೇಶ್ ಶಿಶಿಲ ಹಾಗೂ ಅರಣ್ಯಾಧಿಕಾರಿ ಸಚಿನ್ ಅವರು ಉರಗಗಳ ಬಗೆಗಿನ ವೈಜ್ಞಾನಿಕ ಮಾಹಿತಿ ಮತ್ತು ಪ್ರಾಮುಖ್ಯತೆಯ ಕುರಿತು ಮಕ್ಕಳಿಗೆ ಸ್ಪಷ್ಟನೆ ನೀಡಿದರು. ಶಿಬಿರದಲ್ಲಿ ಹೊಸ್ತೋಟ ಶಾಲೆಯ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.
ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ರಶ್ಮಿತಾ ಶಿಶಿಲ, ಸ್ವಯಂಸೇವಕರಾದ ಅವಿನಾಶ್ ಬಿಢೆ ಅರಸಿನಮಕ್ಕಿ ಮತ್ತು ರಮೇಶ್ ಬಿ. ಶಿಶಿಲ ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ಹೊಸ್ತೋಟ ಹಾಗೂ ಅರಸಿನಮಕ್ಕಿ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಪಾಲ್ಗೊಂಡು ಮಕ್ಕಳಿಗೆ ನೈತಿಕ ಬೆಂಬಲ ನೀಡಿದರು.










