

ನೆಲ್ಯಾಡಿ: ಕೊಣಾಲು ನಿವಾಸಿಯಾದ ರಾಜ್ಯ ಮೀಸಲು ಪೊಲೀಸ್ (KSRP) ತಂಡದ ಏಳನೆ ಮಂಗಳೂರು ಪಡೆಯ ಸಹಾಯಕ ಉಪ ನಿರೀಕ್ಷಕ (ARSI) ಕೆ.ಸಿ. ಬೆನ್ನಿಯವರು ತಮ್ಮ ಶಿಸ್ತುಬದ್ಧ ಹಾಗೂ ಉತ್ಕೃಷ್ಟ ಕಾರ್ಯಕ್ಷಮತೆಗೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಕಮಾಂಡೆಂಟ್ ಸತ್ಯನಾರಾಯಣ ಅವರಿಂದ “ತಿಂಗಳ ಪೊಲೀಸ್ ಪ್ರಶಸ್ತಿ” ಪಡೆದು ಗೌರವ ಪಡೆದಿದ್ದಾರೆ.

ಕೆ.ಸಿ. ಬೆನ್ನಿಯವರು 1997ರಲ್ಲಿ ಮೈಸೂರು ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಸೇವೆ ಪ್ರಾರಂಭಿಸಿ, ಬಳಿಕ ನಾಲ್ಕು ವರ್ಷಗಳ ಸೇವೆಯ ನಂತರ ಮಂಗಳೂರಿಗೆ ವರ್ಗಾವಣೆಯಾಗಿ 2015ರಲ್ಲಿ ಹೆಡ್ ಕಾನ್ಸ್‌ಟೇಬಲ್ ಹುದ್ದೆಗೆ ಮುಂಬಡ್ತಿ ಹೊಂದಿದರು. ಅವರು 2022ರಲ್ಲಿ ಸಹಾಯಕ ಉಪನಿರೀಕ್ಷಕರಾಗಿ (ARSI) ಹುದ್ದೆಗೆ ಮುಂಬಡ್ತಿ ಪಡೆದು ಹಾಸನಕ್ಕೆ ವರ್ಗಾವಣೆಯಾದರೂ, 2023ರ ನವೆಂಬರ್‌ನಲ್ಲಿ ಮಂಗಳೂರಿಗೆ ಮರಳಿದರು.

ಇತ್ತೀಚಿನ ದೈನಂದಿನ 24 ಗಂಟೆಗಳ ಗಸ್ತು ಕಾರ್ಯದಲ್ಲಿ ತೋರಿದ ಶಿಸ್ತಿನ ಕಾರ್ಯವೈಖರಿಯಿಂದ ಅವರು “ಗಸ್ತಿನ ಪಡೆಯೊಳಗೊಬ್ಬ ಶಿಸ್ತಿನ ಅಧಿಕಾರಿ” ಎಂಬ ಪ್ರಶಂಸೆಗೆ ಪಾತ್ರರಾದರು. ಕೇವಲ ನಿರ್ವಹಣಾ ಕರ್ತವ್ಯವಲ್ಲದೆ, ರಿಕ್ರೂಟ್ಮೆಂಟ್, ಚುನಾವಣಾ ಕರ್ತವ್ಯ, ಕ್ರೀಡೋತ್ಸವ ಮತ್ತು ಹಿರಿಯ ಅಧಿಕಾರಿಗಳ ಭೇಟಿಗಳಂತಹ ಮಹತ್ವದ ಸಂದರ್ಭಗಳಲ್ಲಿ ತೋರಿದ ಸಮರ್ಥತೆಯಿಂದ ಹಿರಿಯರಿಂದ ಹಲವಾರು ಪ್ರಶಂಸಾಪತ್ರಗಳು ಮತ್ತು ಫಲಕಗಳನ್ನು ಪಡೆದಿದ್ದಾರೆ.
ಕೆ.ಸಿ.ಬೆನ್ನಿಯವರು ತಮ್ಮ ಸೇವೆಯಲ್ಲೇ ಹಲವಾರು ಅನನ್ಯ ಸೇವೆಗಳ ಮೂಲಕ ಕೂಡ ಗುರುತಿಸಿಕೊಂಡಿದ್ದಾರೆ. ಇದರಲ್ಲಿ ದೀರ್ಘಾವಧಿಯ ಕಾಲ ಶಿಬಿರ ನಾಯಕರ ಕಚೇರಿಯ ದಾಸ್ತಾನು ಕೊಠಡಿಯಲ್ಲಿ ಕಾರ್ಯ ನಿರ್ವಹಣೆ, ಮೂವತ್ತು ಬಾರಿ ರಕ್ತದಾನ ಮಾಡಿರುವುದರಿಂದ ರಕ್ತದಾತರಾಗಿ ಗಮನ ಸೆಳೆದಿರುವುದು, ಹಾಗೂ ವಸತಿಗೃಹದಲ್ಲಿ ಸಂಭವಿಸಿದ ಅಗ್ನಿ ಅವಘಡದ ವೇಳೆ ತಮ್ಮ ಜೀವದ ಹಂಗು ತೊರೆದು ಮನೆಗೆ ಪ್ರವೇಶಿಸಿ ವಿದ್ಯುತ್ ಸ್ವಿಚ್‌ಗಳನ್ನು ಬಂದ್ ಮಾಡಿ, ಅಡುಗೆ ಕೋಣೆಯೊಳಗೆ ತುಂಬಿಸಿಟ್ಟಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದರು.
ಪತ್ನಿ ಸಿನಿ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದು, ಪುತ್ರಿಯರಾದ ಅಭಿನಿ ಮತ್ತು ಅಂಜನಿ.








