

ನೆಲ್ಯಾಡಿ: ನೆಲ್ಯಾಡಿಯ ಪ್ರಮುಖ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಬಹು ದಿನಗಳ ಕನಸಾಗಿದ್ದ ಸುಸಜ್ಜಿತ ಹಾಗೂ ನವೀಕರಿಸಿದ ಸಿಮಿತ್ತೇರಿ ಚಾಪಲ್ ನಿರ್ಮಾಣ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಈ ನವೀಕೃತ ಚಾಪಲ್‌ನ್ನು ಧಾರ್ಮಿಕ ಆಚರಣೆಗಳೊಂದಿಗೆ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಅವರು ಚರ್ಚ್ ಉಪಯೋಗಕ್ಕಾಗಿ ಲೋಕಾರ್ಪಣೆಗೈದರು. ಅವರು ಮಾತನಾಡುತ್ತಾ, “ಅಗಲಿದ ಪೂರ್ವಜರ ಸ್ಮರಣೆ ನಮ್ಮ ಸಂಸ್ಕೃತಿಯ ಬಹುಮುಖ್ಯ ಅಂಶವಾಗಿದ್ದು, ಈ ಚಾಪಲ್ ನಿರ್ಮಾಣದಿಂದ ಆ ಭಕ್ತಿಭಾವನೆಗೆ ಶಾಶ್ವತ ರೂಪ ಸಿಕ್ಕಿದೆ,” ಎಂದು ಅಭಿಪ್ರಾಯಪಟ್ಟರು.

ಚಾಪಲ್ ನಿರ್ಮಾಣ ಕಾರ್ಯಗಳಿಗೆ ಮೇಲ್ವಿಚಾರಕರಾಗಿ ಶ್ರಮಿಸಿದ ಟ್ರಸ್ಟಿಗಳಾದ ಜೋಬಿನ್, ಅಲ್ಬಿನ್, ಅಲೆಕ್ಸಾಂಡರ್ ಹಾಗೂ ಶಿಬು ಅವರನ್ನು ಚರ್ಚ್ ವತಿಯಿಂದ ಸನ್ಮಾನಿಸಲಾಯಿತು. ನಿರ್ಮಾಣದ ಮುಖ್ಯ ಗುತ್ತಿಗೆದಾರರಾಗಿ ಜೇಮ್ಸ್ ಉಪ್ಪಿನಂಗಡಿ ಕಾರ್ಯ ನಿರ್ವಹಿಸಿದರು.
ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಧರ್ಮಗುರು ವಂದನೀಯ ಫಾ. ಶಾಜಿ ಮಾತ್ಯು ಕೃತಜ್ಞತೆ ಸಲ್ಲಿಸಿ, ಅವರ ಶ್ರಮ ಹಾಗೂ ನಿಷ್ಠೆಯನ್ನು ಶ್ಲಾಘಿಸಿದರು. ಭಕ್ತರು ಉದ್ಘಾಟನಾ ಸಮಾರಂಭದಲ್ಲಿ ಶ್ರದ್ಧೆಯಿಂದ ಭಾಗವಹಿಸಿದರು.









