

ಬೆಂಗಳೂರು: ಕೆಪಿಟಿಸಿಎಲ್ ಡಿಪ್ಲೋಮಾ ಇಂಜಿನಿಯರ್ ಅಸೋಸಿಯೇಷನ್ (ರಿ), ಬೆಂಗಳೂರು ಇದರ ಕೇಂದ್ರ ಸಮಿತಿಯ ಚುನಾವಣೆಯಲ್ಲಿ ಶ್ರೀ ರಾಮಚಂದ್ರ ಎ ರವರ ನೇತೃತ್ವದ ‘ಯುವಶಕ್ತಿ’ ತಂಡದ ಎಲ್ಲಾ ಅಭ್ಯರ್ಥಿಗಳು ಭರ್ಜರಿ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ರಾಮಚಂದ್ರ ಎ, ಅಸೋಸಿಯೇಷನ್‌ನ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಸುಮಾರು ಇಪ್ಪತ್ತು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಪ್ರಕ್ರಿಯೆಯ ಮೂಲಕ ಕೇಂದ್ರ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿದ್ದು, ಇದೊಂದು ಐತಿಹಾಸಿಕ ಘಟ್ಟವಾಗಿದೆ. ಸುಮಾರು 3500ಕ್ಕೂ ಅಧಿಕ ಡಿಪ್ಲೋಮಾ ಇಂಜಿನಿಯರ್ ಸದಸ್ಯರನ್ನು ಹೊಂದಿರುವ ಈ ಅಸೋಸಿಯೇಷನ್, ಕೆಪಿಟಿಸಿಎಲ್ ಹಾಗೂ ರಾಜ್ಯದ ಎಲ್ಲಾ ಎಸ್ಕಾಂ ಗಳನ್ನು ಒಳಗೊಂಡಿದೆ.
ಇದಕ್ಕೂ ಹೆಚ್ಚಾಗಿ, ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ಕೇಂದ್ರ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಬೆಂಗಳೂರು ಕೇಂದ್ರದಿಂದ ಹೊರಗಿನ ವಿಭಾಗದ ಪ್ರತಿನಿಧಿಗೆ ದೊರೆತಿರುವುದು ಮೊದಲ ಬಾರಿಗೆ ಸಂಭವಿಸಿರುವುದರಿಂದ, ಈ ಚುನಾವಣೆ ವಿಶೇಷ ಮಹತ್ವವನ್ನು ಪಡೆದಿದೆ.

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬೆದ್ರೋಡಿ ಮೂಲದ ರಾಮಚಂದ್ರ ಎ, ಪ್ರಸ್ತುತ ಮೆಸ್ಕಾಂನ ಪುತ್ತೂರು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಆಗಿ ಹಾಗೂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಹುದ್ದೆಯ ಪ್ರಭಾರದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.











