

ನೆಲ್ಯಾಡಿ: ನೆಲ್ಯಾಡಿ ಲಹರಿ ಸಂಗೀತ ಕಲಾ ಕೇಂದ್ರವು ತನ್ನ 3ನೇ ವರ್ಷದ ವಾರ್ಷಿಕೋತ್ಸವವನ್ನು “ರಾಗಾಂತರಂಗ” ಕಾರ್ಯಕ್ರಮ ಭಾನುವಾರ ಸಂಜೆ 6:30ಕ್ಕೆ ನೆಲ್ಯಾಡಿ ದುರ್ಗ ಶ್ರೀ ಟವರ್ಸ್ ಬಳಿಯ ವೇದಿಕೆಯಲ್ಲಿ ಜರುಗಿತು.

ಕೊಣಾಲು ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಧರ್ಮದರ್ಶಿ ಮಾಧವ ಸರಳಾಯ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಅಹಂಕಾರದ ಬದುಕಿನಿಂದ ದೂರವಿರಬೇಕು. ನಾನೇನು, ನನ್ನಿಂದ ಏನು ಎಂಬ ಜಟಿಲ ಮನೋಭಾವನೆಗಳನ್ನು ಬಿಟ್ಟು ದೇವರ ಭಕ್ತಿಯಲ್ಲಿ ತೊಡಗಿದರೆ ಜೀವನ ಸುಂದರವಾಗುತ್ತದೆ,” ಎಂದು ಶುಭ ಹಾರೈಸಿದರು. ಹಳ್ಳಿ ಪ್ರದೇಶದಲ್ಲೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡುತ್ತಿರುವ ಗುರುಗಳಿಗೆ ಹಾಗೂ ಸಹಕರಿಸುತ್ತಿರುವ ಪೋಷಕರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದುರ್ಗಾ ಶ್ರೀ ನೆಲ್ಯಾಡಿಯ ಸತೀಶ್ ಕೆ.ಎಸ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ, ಪುತ್ತೂರು ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್. ಗೌಡ ಇಚ್ಚಂಪಾಡಿ, ಜೇಸಿಐ ನೆಲ್ಯಾಡಿಯ ಅಧ್ಯಕ್ಷ ಡಾ.ಸುಧಾಕರ್ ಹಾಗೂ ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ ಅಂಚನ್ ಸಂದರ್ಬೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಪುತ್ತೂರು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ಗಿರೀಶ್ ಕುಮಾರ್ ಅವರಿಗೆ “ಲಹರಿ ಸಾಧಕರತ್ನ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಜೊತೆಗೆ ನೆಲ್ಯಾಡಿ ಆದರ್ಶ ಶಾಮಿಯನದ ಮಾಲಕ ದಿನಕರ ಕೆ.ಎಚ್, ಬೆಳ್ಳಾರೆ ಕಲಾ ಮಂದಿರದ ನಿರ್ದೇಶಕ ಪ್ರಮೋದ್ ಕುಮಾರ್, ಮತ್ತು ನೆಲ್ಯಾಡಿ ಜ್ಯೋತಿರ್ವೈದ್ಯ ಹೋಮಿಯೋಪತಿ ಚಿಕಿತ್ಸಾಲಯದ ಡಾ. ಅನೀಶ್ ಕುಮಾರ್ ಸಾದಂಗಾಯ ಇವರ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಲಹರಿ ಕಲಾ ಕೇಂದ್ರದ ಸಂಗೀತ ಗುರು ವಿಶ್ವನಾಥ ಶೆಟ್ಟಿ ಕೆ. ಸ್ವಾಗತಿಸಿದರು. ಮಂಗಳೂರು ವಿ.ವಿ. ಘಟಕ ಕಾಲೇಜು, ನೆಲ್ಯಾಡಿಯ ಉಪನ್ಯಾಸಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಸಿ.ಎಚ್ ವಂದಿಸಿದರು.

ಸಭಾ ಕಾರ್ಯಕ್ರಮಗಳ ಬಳಿಕ, “ವಿ.ಕೆ ಜೋಡಿ ತಾರೆ” ಕರ್ನಾಟಕ ಪ್ರಶಸ್ತಿ ಪುರಸ್ಕೃತ ಕೃಷ್ಣರಾಜ್ ಸುಳ್ಯ ಅವರ ನಿರೂಪಣೆಯಲ್ಲಿ ಕಲಾ ಕೇಂದ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ, ಸುಗಮ ಸಂಗೀತ ಹಾಗೂ ನೃತ್ಯ ಪ್ರದರ್ಶನಗಳು ನಡೆದವು. ಪ್ರೇಕ್ಷಕರಿಂದ ಕಲಾವಿದರಿಗೆ ಭರ್ಜರಿ ಮೆಚ್ಚುಗೆ ದೊರೆಯಿತು.













