ಸಿ ಹೆಚ್ ಸಿ ರೆಜಿ.ವಿ.ಎಂ.ನೆಲ್ಯಾಡಿಗೆ “ಜೋರ್ಜಿಯನ್ ಅವಾರ್ಡ್ 2025” ಪ್ರದಾನ



ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿರುವ ಪ್ರಸಿದ್ಧ ತೀರ್ಥಕ್ಷೇತ್ರವಾದ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನಲ್ಲಿ ಏಳು ದಿನಗಳ ವಾರ್ಷಿಕ ಹಬ್ಬವನ್ನು ಭಕ್ತಿಶ್ರದ್ಧೆಯಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಮೇ 1 ರಿಂದ 7ರವರೆಗೆ ನಡೆದ ಈ ಹಬ್ಬವು ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದು, ಲಕ್ಷಾಂತರ ಮಂದಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಹಬ್ಬದ ಅಂತಿಮ ದಿನವಾದ ಮೇ 7 ರಂದು ಬೆಳಗ್ಗೆ 7.30ಕ್ಕೆ ಪ್ರಭಾತ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಬಳಿಕ ಪವಿತ್ರ ದಿವ್ಯ ಬಲಿ ಪೂಜೆಯನ್ನು ರಾನಿ ನೆಲೆಕ್ಕಲ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತೀವಂದನೀಯ ಡಾ.ಜೋಶ್ವಾ ಮಾರ್ ನಿಕೋದಿಮೋಸ್ ಮೆತ್ರಾಪೋಲೀತ್ತಾ ನೆರವೇರಿಸಿದರು. ಸಂತ ಜಾರ್ಜರ ಮಧ್ಯಸ್ಥ ಪ್ರಾರ್ಥನೆ, ಹಬ್ಬದ ಸಂದೇಶ ಹಾಗೂ ಗೌರವ ಪ್ರದಾನ ಕಾರ್ಯಕ್ರಮ ನಡೆಯಿತು.
11ಕ್ಕೆ ಅನ್ನ ಸಂತರ್ಪಣೆ, ನಂತರ ಮಧ್ಯಾಹ್ನ 12ಕ್ಕೆ ಭಕ್ತರು ಏಲಂ, ಉರುಳು ಸೇವೆ ಸೇರಿದಂತೆ ವಿವಿಧ ಹರಕೆಗಳನ್ನು ಸಲ್ಲಿಸಿದರು. 1.45ಕ್ಕೆ ಹೊಸಂಗಡಿ ಶಿಲುಬೆ ಗೋಪುರದವರೆಗೆ ಮೆರವಣಿಗೆ ನಡೆಯಿತು. 3ಕ್ಕೆ ಆಶೀರ್ವಾದ, 3.15ಕ್ಕೆ ಪ್ರಸಾದ ವಿತರಣೆ ಬಳಿಕ ಸಂಜೆ 5ಕ್ಕೆ ಹಬ್ಬದ ಧ್ವಜ ಇಳಿಸಲು ಪ್ರಾರ್ಥನೆಯೊಂದಿಗೆ ಸಮಾರೋಪವಾಯಿತು.
ಜೋರ್ಜಿಯನ್ ಅವಾರ್ಡ್ 2025:
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಕಂಕನಾಡಿ ನಗರ ಪೊಲೀಸ್ ಠಾಣೆಯ ಸಿ ಹೆಚ್ ಸಿ ರೆಜಿ.ವಿ.ಎಂ.ನೆಲ್ಯಾಡಿ ಅವರು 2024ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ “ಜೋರ್ಜಿಯನ್ ಅವಾರ್ಡ್ 2025” ಗೆ ಭಾಜನರಾದರು. ಈ ಪ್ರಶಸ್ತಿಯನ್ನು ಚರ್ಚ್ ವತಿಯಿಂದ ನೀಡಲಾಯಿತು.
ಚರ್ಚ್‌ನ ಧರ್ಮಗುರು ರೆ.ಫಾ. ವರ್ಗೀಸ್ ತೋಮಸ್, ಟ್ರಸ್ಟಿ ವಿ.ಎನ್.ಚಾಕೋ, ಕಾರ್ಯದರ್ಶಿ ಜೋನ್ಸನ್ ಟಿ.ಕೆ, ಮಾಜಿ ಟ್ರಸ್ಟಿ ಜಾನ್ ಚೀರಾಮಟ್ಟಂ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಬ್ಬದ ಯಶಸ್ಸಿಗೆ ಸಹಕರಿಸಿದರು.












