

ವಿಟ್ಲ: ರಸ್ತೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಇಡ್ಕಿದು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ಕೊಡೆಂಚರಪಾಲು ವಿರುದ್ಧ ಮಹಿಳೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆಯ ಸಂಬಂಧ ಇದೀಗ ಆರೋಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕೂಡಲೇ ಉಚ್ಚಾಟನೆಯಾಗಿದೆ.
ಮನೆಗೆ ಹೋಗುವ ರಸ್ತೆ ಬಳಿಯ ಗೇಟಿಗೆ ಬೀಗ ಹಾಕಿದ್ದ ವಿಚಾರವಾಗಿ ಪದ್ಮನಾಭ ಮತ್ತು ಮಹಿಳೆಯ ನಡುವೆ ವಿವಾದ ಉಂಟಾಗಿದ್ದು, ಈ ಸಂದರ್ಭದಲ್ಲಿ ಮಹಿಳೆಯ ಮುಂದೆ ಚಡ್ಡಿ ಜಾರಿ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿದ್ದಾರೆ ಎಂಬ ಆರೋಪವಾಗಿದೆ. ಈ ಸಂಬಂಧದ ವೀಡಿಯೋವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶ ಹೆಚ್ಚಾಗಿದೆ.
ಮಹಿಳೆ ನೀಡಿದ ದೂರು ದಾಖಲಿಸಿಕೊಂಡು ವಿಟ್ಲ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯ ಗಂಭೀರತೆ ಅರಿತ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಅವರು ಪದ್ಮನಾಭ ಸಪಲ್ಯ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡುವ ಆದೇಶ ಹೊರಡಿಸಿದ್ದಾರೆ. ಜೊತೆಗೆ ಉಪಾಧ್ಯಕ್ಷ ಸ್ಥಾನಕ್ಕೂ ತಕ್ಷಣ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ.













