

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆಗಾಗಿ ರಾಜ್ಯ ಸರ್ಕಾರ ಅಂತಿಮ ಆದೇಶ ನೀಡಿದ್ದು, ಮೇ 12ರಂದು ನಡೆದ ಸಮಿತಿ ಸಭೆಯಲ್ಲಿ ಹರೀಶ್ ಇಂಜಾಡಿ ಅವರನ್ನು ಸಮಿತಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಇದಕ್ಕೂ ಮೊದಲು ಮೇ 11ರಂದು ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಮಹೇಶ್ ಕುಮಾರ್ ಕರಿಕ್ಕಳ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದು ಎಂಬ ನಿರ್ಧಾರವಾಗಿತ್ತು. ಆದರೆ, ಮೇ 12ರಂದು ನಡೆದ ಅಧಿಕೃತ ಸಭೆಯಲ್ಲಿ ಸದಸ್ಯರ ನಡುವೆ ಒಮ್ಮತ ಮೂಡದೆ, ಅಧ್ಯಕ್ಷ ಸ್ಥಾನಕ್ಕೆ ಹರೀಶ್ ಇಂಜಾಡಿ ಹಾಗೂ ಅಶೋಕ್ ನೆಕ್ರಾಜೆ ಅವರು ಆಕಾಂಕ್ಷಿಗಳಾಗಿ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಬಂಡೆದ್ದು ಸ್ಪರ್ಧೆ ನಡೆಸುವ ಸನ್ನಿವೇಶವೂ ಎದುರಾಯಿತು.
ಸಭೆಯಲ್ಲಿ ನೇಮಕಗೊಂಡ ಸದಸ್ಯರು ಮಾತ್ರ ಪಾಲ್ಗೊಂಡು ಸಮಾಲೋಚನೆ ನಡೆಸಿದರು. ಒಂದು ಗಂಟೆಯ ಕಾಲ ನಡೆದ ಈ ಚರ್ಚೆಯಲ್ಲಿ ಸಹಮತಿ ಕಂಡುಬರಲಿಲ್ಲ. ಸಭಾಭವನದ ಹೊರಗೆ ಕಾಯುತ್ತಿದ್ದ ಕೆಲವರು ಒಳಕ್ಕೆ ನುಗ್ಗಿ ಮಾತನಾಡಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ (ಇ.ಒ.) ಅವರು ಹಸ್ತಕ್ಷೇಪ ಮಾಡಿ ಹೊರ ಹೋಗುವಂತೆ ವಿನಂತಿಸಿದರು.
ಎಲ್ಲ ಗೊಂದಲಗಳಿಗೆ ತೆರೆ ಬೀಳುತ್ತಾ, ಅಂತಿಮವಾಗಿ ಹರೀಶ್ ಇಂಜಾಡಿ ಅವರನ್ನು ಸಮಿತಿ ಸದಸ್ಯರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಮಾಡಿದ್ದಾರೆ.













