

ಕೊಕ್ಕಡ: ಬೆಳ್ತಂಗಡಿ ರೋಟರಿ ಕ್ಲಬ್, ಐಡಿಎ ಪುತ್ತೂರು ಘಟಕ, ಸುಳ್ಯ ಕೆವಿಜಿ ಡೆಂಟಲ್ ಕಾಲೇಜು ಮತ್ತು ಹಾಸ್ಪಿಟಲ್, ಜೆಸಿಐ ಕೊಕ್ಕಡ ಕಪಿಲಾ ಮತ್ತು ಇತರೆ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಳೆಂಜ ಗ್ರಾ.ಪಂ.ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆತಡ್ಕದಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು.

ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಶಿಬಿರವನ್ನು ರೋ.ಸಂದೇಶ್ ಕುಮಾರ್ ರಾವ್ ಮತ್ತು ರೋ.ಡಾ.ರಾಘವೇಂದ್ರ ಪಿದಮಲೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ರೋ.ಸಂದೇಶ್ ಕುಮಾರ್ ರಾವ್ ಮಾತನಾಡಿ, “ಗ್ರಾಮೀಣ ಭಾಗದ ಜನತೆಗೆ ಸಮರ್ಪಿತ ಆರೋಗ್ಯ ಸೇವೆ ದೊರೆಯುವುದು ಮುಖ್ಯ. ರೋಟರಿಯಂತಹ ಸಂಸ್ಥೆಗಳು ಶಿಬಿರದ ಮೂಲಕ ಈ ಸೇವೆಗಳನ್ನು ತಲುಪಿಸುತ್ತಿರುವುದು ಶ್ಲಾಘನೀಯ,” ಎಂದು ಹೇಳಿದರು.
“ಸಾಮಾನ್ಯವಾಗಿ ಜನರು ಆಸ್ಪತ್ರೆ ಹುಡುಕಿ ಹೋಗುತ್ತಾರೆ. ಆದರೆ ಈ ಶಿಬಿರದಲ್ಲಿ ವೈದ್ಯರೇ ಗ್ರಾಮೀಣ ಪ್ರದೇಶಕ್ಕೆ ಬಂದು ಜನರ ಆರೋಗ್ಯದ ಬಗ್ಗೆ ತಪಾಸಣೆ ನಡೆಸಿದ್ದಾರೆ. ಇದು ಜನಸಾಮಾನ್ಯರಿಗೆ ಬಹುಪಾಲು ಸಹಾಯಕವಾಗಿದೆ,” ಎಂದು ರೋ. ಡಾ. ರಾಘವೇಂದ್ರ ಪಿದಮಲೆ ಅಭಿಪ್ರಾಯಪಟ್ಟರು.
60 ಕ್ಕೂ ಹೆಚ್ಚು ಜನರಿಗೆ ತಪಾಸಣೆ ಹಾಗೂ ಚಿಕಿತ್ಸೆ
ಶಿಬಿರದಲ್ಲಿ ಕೆವಿಜಿ ಡೆಂಟಲ್ ಕಾಲೇಜು ವೈದ್ಯರು ಸೇರಿದಂತೆ ನುರಿತ ತಜ್ಞರು ಭಾಗವಹಿಸಿ, ಮಕ್ಕಳಿಂದ ಹಿಡಿದು ಹಿರಿಯರ ತನಕ ಉಚಿತ ತಪಾಸಣೆ ಹಾಗೂ ಅಗತ್ಯವಿದ್ದವರಿಗೆ ದಂತ ಭರ್ತಿ, ಹಲ್ಲು ಶುಚಿಗೊಳಿಸುವಿಕೆ, ಹಲ್ಲು ಹೊರತೆಗೆಯುವಿಕೆ, ಕೃತಕ ಹಲ್ಲುಗಳ ಜೋಡಣೆಯಂತಹ ಚಿಕಿತ್ಸೆಯನ್ನು ನೀಡಿದರು. ಒಟ್ಟು 60 ಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆದುಕೊಂಡರು.
ಶಿಬಿರದಲ್ಲಿ ಆನ್.ಡಾ.ದೀಪಾಲಿ ಡೊಂಗ್ರೆ, ರೋ.ಉದಯ ಶಂಕರ್, ಜೆಸಿಐ ಕೊಕ್ಕಡ ಕಪಿಲಾ ಅಧ್ಯಕ್ಷೆ ಶೋಭಾ.ಪಿ, ಸದಸ್ಯರು ಹಾಗೂ ಶಾಲೆಯ ಆಡಳಿತ ಮಂಡಳಿ ಸಹಕರಿಸಿದ್ದರು. ಶೋಭಾ.ಪಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.












