

ನೆಲ್ಯಾಡಿ: ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಗುರುವಾರದಂದು “ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮ ಮತ್ತು ಕ್ರೀಡಾ ಸ್ಪರ್ಧೆಗಳು” ವಿಜೃಂಭಣೆಯಿಂದ ನೆರವೇರಿದವು. ಕಾಲೇಜಿನ ಸಂಯೋಜಕರಾದ ಡಾ.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜನಾರ್ಧನ ಗೌಡ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಪಿಎಂ ಶ್ರೀ ಉನ್ನತೀಕರಿಸಿದ ಶಾಲೆ ನೆಲ್ಯಾಡಿ ಅವರು ಉದ್ಘಾಟನೆ ನೆರವೇರಿಸಿದರು. ಅವರು ಮಾತನಾಡಿ, “ಜೀವನದ ಯಶಸ್ಸಿಗೆ ಕ್ರೀಡಾ ಚಟುವಟಿಕೆಗಳು ಬಹುಪಾಲು ಪೂರಕವಾಗಿದೆ. ಆರೋಗ್ಯಯುತ ದೇಹದಲ್ಲಿ ಆರೋಗ್ಯಯುತ ಮನಸ್ಸು ವಾಸಮಾಡುತ್ತದೆ. ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಅತ್ಯಂತ ಉಪಯುಕ್ತವಾಗಿದೆ. ಓಟದಲ್ಲಿ ಟ್ರ್ಯಾಕ್ ತಪ್ಪದೇ ಓಡಿದರೆ ಗುರಿ ತಲುಪಬಹುದು. ಹಾಗೆಯೇ ಜೀವನದಲ್ಲೂ ನೀತಿ ಮತ್ತು ನಿಯಮ ಪಾಲನೆ ಮೂಲಕ ಯಶಸ್ಸು ಸಾಧಿಸಬಹುದು,” ಎಂದು ನುಡಿದರು.
ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಇತಿಹಾಸ ವಿಭಾಗದ ಡಾ.ಸೀತಾರಾಮ ಪಿ. ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ರಾಹುಲ್ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪಾವನ ಹಾಗೂ ಶ್ರೀಮತಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವೆರೋನಿಕಾ ಪ್ರಭಾ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ನೆಲ್ಯಾಡಿ ವಿವಿಯ ದೈಹಿಕ ಉಪನ್ಯಾಸಕರಾದ ಪಾವನಕೃಷ್ಣ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದ ಸದಸ್ಯರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.













