ಎದೆ ತಟ್ಟಿ ಹೇಳಿ ನಾನೊಬ್ಬ ಐಟಿಐ ವಿದ್ಯಾರ್ಥಿ” — ಶ್ರೀ ಕೇಶವ ಅಮೈ


ನೆಲ್ಯಾಡಿ: “ಐಟಿಐ ಕಲಿತ ವಿದ್ಯಾರ್ಥಿಗೆ ಈ ನೂತನ ಯುಗದಲ್ಲಿ ಇತರ ತಾಂತ್ರಿಕ ವಿದ್ಯಾಭ್ಯಾಸಗಳಿಗಿಂತಲೂ ಹೆಚ್ಚಿದ ಬಲವಿದೆ. ದೇಶದ ತಾಂತ್ರಿಕ ಮತ್ತು ಕೃಷಿ ಪ್ರಗತಿಯಲ್ಲಿ ಇವರು ಪ್ರಮುಖ ಪಾತ್ರ ವಹಿಸಬಲ್ಲರು. ಇಂದು ಐಟಿಐ ಕಲಿತ ವಿದ್ಯಾರ್ಥಿಗೆ ದುಪ್ಪಟ್ಟಾದ ಅವಕಾಶಗಳಿವೆ, ಉತ್ತಮ ಸಂಬಳವಿದೆ. ನಾನು ಈ ಮಾರ್ಗದಲ್ಲಿ ನಡೆಯುತ್ತಿದ್ದೇನೆ ಎಂಬುದಕ್ಕೆ ನಾನೇ ಸಾಕ್ಷಿ. ಉದ್ಯೋಗ ಮಾಡಬಲ್ಲ, ಉದ್ಯಮ ಸ್ಥಾಪಿಸಿ ನೂರಾರು ಉದ್ಯೋಗ ನೀಡಬಲ್ಲ ಶಕ್ತಿಯು ಐಟಿಐ ಶಿಕ್ಷಣದಲ್ಲಿ ಅಡಕವಾಗಿದೆ” ಎಂದು ಪುತ್ತೂರಿನ ಎಸ್‌ಆರ್‌ಕೆ ಇಂಡಸ್ಟ್ರೀಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಅಮೈ ಹೇಳಿದರು.
ಅವರು ನೆಲ್ಯಾಡಿಯ ಪ್ರತಿಷ್ಠಿತ ಬೆಥನಿ ಐಟಿಐ ಸಂಸ್ಥೆಯ 29ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಷಣ ಮಾಡುತ್ತಿದ್ದರು. ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವಂತೆಯೂ, ಉದ್ಯೋಗ ಹಾಗೂ ಉದ್ಯಮದ ದಾರಿಯಲ್ಲಿ ಪ್ರೇರಣೆಯಾದಂತೆಯೂ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ನಿರ್ದೇಶಕರಾದ ರೆ.ಫಾ. ಜೈಸನ್ ಸೈಮನ್ ಅವರು, “ಇಂದಿನ ಭಾರತದಲ್ಲಿ ಕೌಶಲ್ಯವಂತ ಐಟಿಐ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳಿವೆ. ನಮ್ಮ ಸಂಸ್ಥೆ ಇಂಥ ಪ್ರತಿಭಾವಂತರನ್ನು ತಯಾರಿಸುವಲ್ಲಿ ಶ್ರಮಿಸುತ್ತಿದೆ” ಎಂದು ತಿಳಿಸಿದರು.
ಬೆಥನಿ ಸಂಸ್ಥೆಯ ಮಾರ್ಗದರ್ಶಕರಾದ ರೆ.ಡಾ. ವರ್ಗೀಸ್ ಕೈಪನಡ್ಕ ಅವರು ಶುಭ ಹಾರೈಸಿ, “ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸಲು ನಿರಂತರ ಶ್ರಮಿಸಿ, ಪ್ರಗತಿಯ ಕನಸುಗಳು ನನಸಾಗಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಇನ್ನೂ ಒಬ್ಬ ವಿಶೇಷ ಅತಿಥಿಯಾಗಿ ಹಾಜರಿದ್ದ ಐಟಿಐ ಪೂರ್ವ ವಿದ್ಯಾರ್ಥಿ ಅವಿನಾಶ್ ಡಿ’ಸೋಜ ಅವರು ವಿದ್ಯಾರ್ಥಿಗಳಿಗೆ ಹಾರೈಕೆ ಸಲ್ಲಿಸಿದರು.
ಸಂಸ್ಥೆಯ ಪ್ರಾಚಾರ್ಯ ಸಜಿ.ಕೆ. ತೋಮಸ್ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ತರಬೇತಿ ಅಧಿಕಾರಿ ಜಾನ್ ಪಿ.ಎಸ್. ಸ್ವಾಗತಿಸಿದರು. ತರಬೇತಿ ಅಧಿಕಾರಿ ಹರಿಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ವಂದಿಸಿದರು.













