

ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಮಂಗಳೂರು ಹಾಗೂ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ (ದ.ಕ.) ಇದರ ಆರ್‌ಐಡಿಎಫ್-30 ರಲ್ಲಿ ಮಂಜೂರಾದ ಪಶು ಚಿಕಿತ್ಸಾಲಯ ನೂತನ ಕಟ್ಟಡದ ಶಂಕು ಸ್ಥಾಪನ ಕಾರ್ಯಕ್ರಮ ಶನಿವಾರ ಇಚಿಲಂಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಬಳಿ ನಡೆಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಕೆಸರು ಕಲ್ಲುಹಾಕಿ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, “ಮನುಷ್ಯರ ಆರೋಗ್ಯಕ್ಕಾಗಿ ಆಸ್ಪತ್ರೆಗಳ ನಿರ್ಮಾಣ ಹೇಗೆ ಅಗತ್ಯವೋ, ಮೂಕ ಜೀವಿಗಳಿಗಾಗಿ ಪಶು ಚಿಕಿತ್ಸಾಲಯಗಳೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಶು ವೈದ್ಯಾಧಿಕಾರಿ ಡಾ.ಅಜಿತ್ ಅವರ ಮುತುವರ್ಜಿ ಮತ್ತು ಪ್ರಾಮಾಣಿಕ ಸೇವೆಯಿಂದಾಗಿ 49 ಲಕ್ಷ ರೂ. ಅನುದಾನದಲ್ಲಿ ಈ ಸುಸಜ್ಜಿತ ಕಟ್ಟಡದ ನಿರ್ಮಾಣ ನಡೆಯುತ್ತಿದೆ” ಎಂದು ತಿಳಿಸಿದರು. “ಕೊಯಿಲದಲ್ಲಿ ಮಲೆನಾಡು ಗಿಡ್ಡ ದನಗಳನ್ನು ರೈತರಿಗೆ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ರೈತರು ಇದರ ಪ್ರಯೋಜನ ಪಡೆದುಕೊಂಡು ಸಾವಯವ ಕೃಷಿಗೆ ಬದಲಾಗಬೇಕು. ಹಟ್ಟಿಗೊಬ್ಬರ ಬಳಕೆಯೊಂದಿಗೆ ರಾಸಾಯನಿಕ ಮುಕ್ತ ಜೀವನ ಶೈಲಿಯತ್ತ ಜನ ಸಾಗಬೇಕು. ಈ ಕಟ್ಟಡವು ಮೂರು ತಿಂಗಳಲ್ಲಿ ಪೂರ್ಣಗೊಂಡು ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಲಿ” ಎಂದು ಆಶಿಸಿದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಕೌಕ್ರಾಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಉದಯ ದೋಂತಿಲ, ಇಚಿಲಂಪಾಡಿ ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಗೌಡ ಅಲೆಕ್ಕಿ, ಕೌಕ್ರಾಡಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ದೇವಿಕಾ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಪಶುವೈದ್ಯಾಧಿಕಾರಿ ಡಾ.ಅಜಿತ್ ಎಂ.ಎಸ್. ಉಪಸ್ಥಿತರಿದ್ದರು.
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಭಿಲಾಷ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚಿಲಂಪಾಡಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ವಲ್ಸಮ್ಮ ಕೆ.ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಷಾ ಅಂಚನ್, ಅಶ್ರಫ್ ಶೇಡಿಗುಂಡಿ, ಗ್ರಾಮ ಪಂಚಾಯಿತಿ ಸದಸ್ಯರು, ಗ್ಯಾರಂಟಿ ಯೋಜನೆ ಕಡಬ ತಾಲೂಕು ಅನುಷ್ಟಾನ ಸಮಿತಿ ಸದಸ್ಯರು, ಸೊಸೈಟಿ ನಿರ್ದೇಶಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಮುಖ್ಯ ಪಶುವೈದ್ಯಾಧಿಕಾರಿ ಡಾ.ಅಜಿತ್.ಎಂ.ಎಸ್ ಸ್ವಾಗತಿಸಿದರು. ಶ್ರೀಧರ ನೂಜಿನ್ನಾಯ ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಿರ್ದೇಶಕ ರಾಧಕೃಷ್ಣ ಕೆರ್ನಡ್ಕ ಕಾರ್ಯಕ್ರಮ ನಿರೂಪಿಸಿದರು. ಪಶು ವೈದ್ಯಾಧಿಕಾರಿ ಡಾ.ಮಲ್ಲಿಕಾ ವಂದಿಸಿದರು.













