

ಮಂಗಳೂರು: ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕರೊಬ್ಬರು ಇರಾ ಗ್ರಾಮದ ವ್ಯಕ್ತಿಯೊಬ್ಬರಿಗೆ ಮನೆ ನಿರ್ಮಾಣಕ್ಕೆ ಕಟ್ಟಡಕಲ್ಲು ತೆಗೆದು ಸಮತಟ್ಟು ಮಾಡುವುದಕ್ಕಾಗಿ ಅನುಮತಿ ನೀಡಲು ಬುಧವಾರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆ ಬಿದ್ದಿರುವ ಘಟನೆ ವರದಿಯಾಗಿದೆ.
ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ ಸಿಬ್ಬಂದಿ ಪ್ರದೀಪ್ ಎಂಬವರನ್ನು ಮೂಲಕ ಫೈಲಿಗೆ 50,000 ರೂ. ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅವರನ್ನು ವಶಕ್ಕೆ ತೆಗೆದುಕೊಡಿದ್ದಾರೆ. ಉಳ್ಳಾಲ ತಾಲೂಕು ಇರಾ ಗ್ರಾಮದ ಸರ್ವೆ ನಂಬ್ರ 279/5 ರಲ್ಲಿ 139 ಎಕರೆ ವಿಸ್ತೀರ್ಣದ ಜಮೀನಿನ ಪೈಕಿ 0.35 ಎಕರೆ ಪ್ರದೇಶದಲ್ಲಿ ಮನೆಯನ್ನು ಕಟ್ಟುವ ಉದ್ದೇಶದಿಂದ ಕಟ್ಟಡಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ನೀಡಲು ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 2024 ಅಕ್ಟೋಬರ್ 28ರಂದು ಅರ್ಜಿ ಸಲ್ಲಿಸಿದ್ದರು.
ಉಳ್ಳಾಲ ತಹಶೀಲ್ದಾರರು ಸಮತಟ್ಟು ಮಾಡುವ ಸಲುವಾಗಿ ಜಮೀನಿನಲ್ಲಿ ಲಭ್ಯವಿರುವ ಕಟ್ಟಡಕಲ್ಲು ತೆಗೆಯಲು ಪ್ರಮಾಣಪತ್ರ, ದೃಢಿಕರಣ ಪತ್ರ ನೀಡಬಹುದಾಗಿದೆ ಎಂದು 2025 ಮಾರ್ಚ್ 21 ರಂದು ವರದಿ ಸಲ್ಲಿಸಿದ್ದರೂ ಕೂಡ ಗಣಿ ಇಲಾಖೆಯಿಂದ ಅನುಮತಿ ನೀಡಿಲ್ಲ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಅರ್ಜಿಯ ಬಗ್ಗೆ ವಿಚಾರಿಸಲು ಪಿರ್ಯಾದಿದಾರರು ಮಂಗಳೂರು ಗಣಿ ಇಲಾಖೆ ಕಚೆೇರಿಗೆ ತೆರಳಿದ್ದು, ಅಲ್ಲಿನ ಉಪನಿರ್ದೇಶಕರಾದ ಕೃಷ್ಣವೇಣಿ ರವರು ಸಿಬ್ಬಂದಿ ಪ್ರದೀಪ್ ಎಂಬವರನ್ನು ಕರೆಯಿಸಿ ‘‘ಫೈಲಿಗೆ 50,000 ರೂ. ತಗೊಳ್ಳಿ, ನಂತರ ಸೈನ್ ಮಾಡುವ’’ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಪಿರ್ಯಾದುದಾರರು ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಪ್ ರವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬುಧವಾರ ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕರಾದ ಕೃಷ್ಣವೇಣಿರವರು ಚಾಲಕ ಮಧುರವರ ಮೂಲಕ ರೂ 50,000 ಲಂಚದ ಪಡೆಯತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದರು. ಗಣಿ ಇಲಾಖೆಯ ಉಪನಿರ್ದೇಶಕರು ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರು (ಪ್ರಭಾರ) ಕುಮಾರಚಂದ್ರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ಹಾಗೂ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ, ರಾಜೇಂದ್ರ ನಾಯ್ಕ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.













