

ಕಡಬ ತಾಲೂಕಿನಲ್ಲಿ ಇಚ್ಲಂಪಾಡಿ ಗ್ರಾಮದ ಸೇತುವೆ ಬಳಿ 21 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಇಚ್ಲಂಪಾಡಿ ಗ್ರಾಮದ ಕೆಡೆಂಬೇಲು ಮನೆ ನಿವಾಸಿ ಜಯಾನಂದ ಶೆಟ್ಟಿ ಯವರ ಮಗ ಚೇತನ್ ಶೆಟ್ಟಿ(21) ಎಂದು ಗುರುತಿಸಲಾಗಿದ್ದು, ಈತನು ಮಂಗಳೂರಿನಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿಕೆಲಸ ಮಾಡುತ್ತಿದ್ದು, ಈ ದಿನ ರಜೆಯ ಸಂದರ್ಭ ಮನೆಯಲ್ಲೇ ಇದ್ದನು.
ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಕ್ರಿಕೆಟ್ ಆಡಲು ಹೊರಟ ಚೇತನ್ ಶೆಟ್ಟಿ, ಮಧ್ಯಾಹ್ನದ ವೇಳೆಗೆ ಸ್ನೇಹಿತರ ಜೊತೆ ಇಚ್ಲಂಪಾಡಿ ಸೇತುವೆ ಬಳಿ ಇರುವ ನೂಜಿಬಾಳ್ತಿಲ ಗ್ರಾಮದ ಗುಂಡ್ಯ ಹೊಳೆಗೆ ಸ್ನಾನಕ್ಕೆ ಇಳಿದನು. ಆದರೆ ಹೊಳೆಯ ನೀರಿನ ಆಳತೆ ಅರಿಯದೇ ಮಧ್ಯಾಹ್ನ ಸುಮಾರು 1.30 ಗಂಟೆಯ ವೇಳೆಗೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಮೃತ ಯುವಕನ ಸಂಬಂಧಿಕ ದುರ್ಗಾಪ್ರಸಾದ್ ಎಂಬವರು ದೂರವಾಣಿ ಮೂಲಕ ಈ ದುರ್ಘಟನೆಯ ಮಾಹಿತಿಯನ್ನು ಕುಟುಂಬಕ್ಕೆ ನೀಡಿದ್ದು, ತಂದೆ ಜಯಾನಂದ ಶೆಟ್ಟಿ ಹಾಗೂ ಬಾವ ಆನಂದ ಶೆಟ್ಟಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.
ಸ್ಥಳೀಯ ವ್ಯಕ್ತಿಯಾದ ಜಾಯ್ ಪಿ.ಪಿ. ಎಂಬವರು ಚೇತನನನ್ನು ನೀರಿನಿಂದ ಹೊರತೆಗೆದಿದ್ದಾರೆ. ಆದರೆ ಆ ವೇಳೆಗೆ ಆತ ಪ್ರಾಣ ಕಳೆದುಕೊಂಡಿದ್ದ.
ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













