ಬುರ್ಕಾ ಧರಿಸಿದ ಯುವತಿ, ಯುವಕನಿಗೆ ನೈತಿಕ ಪೊಲೀಸ್‌ಗಿರಿ: ಬಿಡದಿ ಪೊಲೀಸರಿಂದ ಇಬ್ಬರ ಬಂಧನ

ಶೇರ್ ಮಾಡಿ

ಬೈಕ್‌ನಲ್ಲಿ ಹೋಗುತ್ತಿದ್ದ ಅಪರಿಚಿತ ಯುವಕ-ಯುವತಿಯನ್ನು ಅಡ್ಡಗಟ್ಟಿ ನೈತಿಕ ಪೊಲೀಸ್‌ ಗಿರಿ ತೋರಿದ ಆರೋಪದ ಮೇಲೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಬಿಡದಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ಮೂಲದ ಯಾಸಿನ್‌ ರಜಾಕ್‌, ರಾಮನಗರದ ಅಕ್ಮಲ್‌ ಪಾಷ ಮತ್ತು ಮುಕ್ಸುದ್‌ ಎಂಬುವರು ಬಂಧಿತ ಆರೋಪಿಗಳು.

ಬೆಂಗಳೂರು ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ಯುವಕನೊಬ್ಬ ತನ್ನ ಹಿಂಬದಿಯಲ್ಲಿ ಬುರ್ಕಾ ಧರಿಸಿದ ಯುವತಿಯನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಬಿಡದಿಯ ಭೈರಮಂಗಲ ಕ್ರಾಸ್‌ ಸಮೀಪದ ರಂಗೇಗೌಡನದೊಡ್ಡಿ ಬಳಿ ಮೂವರು ಬೈಕ್‌ ತಡೆದು ನಿಲ್ಲಿಸಿ ಯುವಕನಿಗೆ ಧಮಿಕಿ ಹಾಕಿದ್ದಲ್ಲದೆ ಯುವತಿಗೆ ನಾನಾ ಪ್ರಶ್ನೆಗಳನ್ನು ಕೇಳುವ ಮೂಲಕ ಯುವತಿಯನ್ನು ಸಾರ್ವಜನಿಕವಾಗಿ ಮಾನಹಾನಿ ಮಾಡುವ ರೀತಿಯಲ್ಲಿ ಪ್ರಯತ್ನಿಸಿರುವುದು ಕಂಡುಬಂದಿದೆ.

ಅಪರಿಚಿತ ಯುವಕ ತೋರಿಸಿರುವ ವಿಡಿಯೋ ದೃಶ್ಯವನ್ನು ಯಾಸಿನ್‌ ರಜಾಕ್‌ ಎಂಬಾತ ತನ್ನ ಫೇಸ್‌ಬುಕ್‌ ಖಾತೆಯಲ್ಲಿಅಪ್‌ಲೋಡ್‌ ಮಾಡಿದ್ದನು. ಸೋಷಿಯಲ್‌ ಮೀಡಿಯಾ ಮಾನಿಟರಿಂಗ್‌ ಸೆಲ್‌ ಮಾಹಿತಿ ಸಂಗ್ರಹ ಕರ್ತವ್ಯದಲ್ಲಿದ್ದ ಬಿಡದಿ ಠಾಣೆಯ ಪೇದೆ ಅಭಿಷೇಕ್‌ ಅವರು ಭಾನುವಾರ ಬೆಳಗ್ಗೆ ಸದರಿ ವಿಡಿಯೋ ದೃಶ್ಯವನ್ನು ಕಂಡು ಠಾಣಾಧಿಕಾರಿಗಳ ಗಮನಕ್ಕೆ ತಂದಿರುತ್ತಾರೆ. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬೈಕ್‌ನಲ್ಲಿ ಹೋಗುತ್ತಿದ್ದ ಯುವಕ ಯುವತಿಯನ್ನು ತಡೆದು ಎಲ್ಲಿಗೆ ಹೋಗುತ್ತಿದ್ದೀರಿ? ಯಾವ ಊರು? ಏ.. ನಿಂತ್ಕೋ ಬೇಕು ಇಲ್ಲೆ.. ನಿನಗೂ ಇವನಿಗೂ ಏನು ಸಂಬಂಧ? ಬುರ್ಕಾ ತೊಟ್ಟು ಈ ಹುಡುಗನ ಜತೆ ಏಕೆ ಹೋಗುತ್ತಿರುವೆ? ನಿಮ್ಮಪ್ಪ ಯಾರು? ಅವರ ಫೋನ್‌ ನಂಬರ್‌ ಕೊಡು ಎಂದು ಯುವತಿಯನ್ನು ನಾನಾ ರೀತಿಯಲ್ಲಿ ಪ್ರಶ್ನಿಸಿರುವುದು. ಹಾಗೆಯೇ ಜತೆಗಿದ್ದ ಯುವಕನಿಗೂ ಧಮಿಕಿ ಹಾಕಿರುವುದು ವಿಡಿಯೋ ದೃಶ್ಯದಲ್ಲಿ ಸೆರೆಯಾಗಿದೆ.

ಸಾರ್ವಜನಿಕ ರಸ್ತೆಯಲ್ಲಿಅಡ್ಡಗಟ್ಟಿ ತಡೆದು ಅಪರಿಚಿತ ಯುವತಿಗೆ ಮಾನಹಾನಿ ಆಗುವ ರೀತಿಯಲ್ಲಿ ಮಾತನಾಡುವ ಜತೆಗೆ ವಿಡಿಯೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದರಿಂದ ಸಮಾಜದಲ್ಲಿಅಶಾಂತಿ ಉಂಟಾಗಿ ಕೋಮುಗಲಭೆಗೆ ಉತ್ತೇಜನ ನೀಡಿದಂತಾಗಿದೆ ಎಂಬುದಾಗಿ ಪರಿಗಣಿಸಲಾಗಿದೆ. ಈ ಸಂಬಂಧ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  •  

Leave a Reply

error: Content is protected !!