


ಕಡಬ: ಕಡಬ ತಾಲೂಕಿನಲ್ಲಿ ಕಳೆದ ಹಲವಾರು ದಿನಗಳಿಂದ ಮುಂಗಾರು ಮಳೆ ತನ್ನ ಅಬ್ಬರ ತೋರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಇಚ್ಲಂಪಾಡಿ -ಮಾನಡ್ಕ- ಮಡಿಪು ಸೇರಿದಂತೆ ಹಲವೆಡೆ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಇಚ್ಲಂಪಾಡಿ ಗ್ರಾಮದಲ್ಲಿ ನಡೆಯುತ್ತಿದ್ದಮಳೆಯ ಪರಿಣಾಮವಾಗಿ ನೀರು ರಸ್ತೆಗೆ ಹರಿದು ಮಾನಡ್ಕ–ಮಡಿಪು ರಸ್ತೆಯಲ್ಲಿ ಸಂಪೂರ್ಣ ನೀರಿನಿಂದ ಆವೃತ್ತವಾಗಿದೆ. ಇದರ ಜತೆಗೆ, ರಾಷ್ಟೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಗುಡ್ಡೆ ಕುಸಿದ ಘಟನೆ ನಡೆದಿದ್ದು, ಮಣ್ಣು ಹಾಗೂ ಕಲ್ಲುಗಳು ಹೆದ್ದಾರಿಗೆ ಬಿದ್ದು ಟ್ರಾಫಿಕ್ ಬಂದ್ ಆಗಿತ್ತು.
ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾಮಗಾರಿ ಗುತ್ತಿಗೆದಾರರಿಂದ ತುರ್ತು ಮಣ್ಣು ತೆರವು ಕಾರ್ಯಾಚರಣೆ ನಡೆಸಿ ರಸ್ತೆ ಸಂಚಾರ ಪುನಃ ಆರಂಭಗೊಳಿಸಲಾಯಿತು. ಆದರೆ ಕುಸಿದ ಗುಡ್ಡದ ಭಾಗ ಇನ್ನೂ ಸಡಿಲವಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಮುನ್ನೆಚ್ಚರಿಕೆಯ ಸೂಚನೆ ನೀಡಲಾಗಿದೆ.
ಮಳೆಗೆ ಜೊತೆಗೆ ಗಾಳಿಯೂ ಅಬ್ಬರಿಸುತಿದ್ದ ಪರಿಣಾಮ, ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಿದೆ. ಹಲವೆಡೆ ವಿದ್ಯುತ್ ಕಂಬಗಳು ಬಿದ್ದಿದ್ದು, ರಸ್ತೆಗೆ ಮರ ಬಿದ್ದು ಕೆಲವೊಂದಿಷ್ಟು ಶಾಲೆಗಳ ಶಾಲಾ ವಾಹನಗಳು ಹಾಗೂ ಕೆಎಸ್ಆರ್‌ಟಿಸಿ ಬಸ್ ಗಳು ದಾರಿಯ ಮಧ್ಯೆ ನಿಂತು ಹೋಗಿರುವ ಘಟನೆಗಳು ವರದಿಯಾಗಿವೆ. ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.








