


ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತೊಟ್ಟು ಜಂಕ್ಷನ್ ಸಮೀಪ ಭಾರೀ ಮಳೆಯ ನಡುವೆ ಓಮ್ನಿ ಕಾರು ಪಲ್ಟಿಯಾದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಸಕಲೇಶಪುರ ಮೂಲದ ಕುಟುಂಬ ಮಂಗಳೂರಿನ ಆಸ್ಪತ್ರೆಗೆ ಹೋಗಿ ಮನೆಗೆ ಮರಳುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದ್ದು, ಕಾರಿನಲ್ಲಿ ದಂಪತಿಗಳೊಂದಿಗೆ ಪುಟ್ಟ ಮಗು ಸಹ ಪ್ರಯಾಣಿಸುತ್ತಿತ್ತು. ಅಪಘಾತದಲ್ಲಿ ರೇಖಾ(38) ಎಂಬ ಮಹಿಳೆ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಪಘಾತದ ವೇಳೆ ಕಾರು ಸಂಪೂರ್ಣವಾಗಿ ಜಖಂ ಆಗಿದ್ದು, ರಸ್ತೆ ಮಧ್ಯೆ ಚತುಷ್ಪದ ಕಾಮಗಾರಿ ನಡೆಯುತ್ತಿದ್ದು ಮಳೆಯ ನೀರು ಸರಿಯಾಗಿ ಹರಿಯುವ ವ್ಯವಸ್ಥೆ ಇಲ್ಲದಿರುವುದು ಈ ದುರ್ಘಟನೆಯ ಮುಖ್ಯ ಕಾರಣವಾಗಿದೆ. ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿ ಹರಿದಿದ್ದರಿಂದ, ಚಾಲಕ ನೀರನ್ನು ತಪ್ಪಿಸಲು ಬಲಬದಿಗೆ ತಿರುಗಿದಾಗ ಕಾರು ಡಿವೈಡರ್ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ.









