ಕಿಡಿಗೇಡಿಗಳ ಕೈಚಳಕವೋ? ಪ್ರಕೃತಿ ವಿಕೋಪವೋ? ಸಾರ್ವಜನಿಕರಲ್ಲಿ ಗೊಂದಲ, ತಕ್ಷಣ ಕ್ರಮಕ್ಕೆ ಒತ್ತಾಯ



ನೆಲ್ಯಾಡಿ: ಗೋಳಿತೊಟ್ಟುನ ಮೂಲಕ ಕೊಕ್ಕಡ, ಪಟ್ರಮೆ, ಮೊದಲಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗದ ಇಕ್ಕೆಲಗಳಲ್ಲಿ ಅಳವಡಿಸಲಾಗಿದ್ದ ಸೂಚನಾ ಫಲಕಗಳ ಪೈಕಿ ಕೆಲವು ಫಲಕಗಳು ದಾರಶಾಹಿಯಾಗಿದ್ದು ಇನ್ನು ಕೆಲವು ಬಾಗಿದೆ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡಿದೆ.
ರಸ್ತೆ ಮಾರ್ಗದ ಕೆಲವು ನಿರ್ಜನ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಸುಮಾರು ಹತ್ತಕ್ಕೂ ಅಧಿಕ ಫಲಕಗಳು ನೆಲಕ್ಕುರುಳಿವೆ, ಕೆಲವು ಭಾಗಗಳಲ್ಲಿ ಬಾಗಿದ ರೀತಿಯಲ್ಲಿ, ಇನ್ನು ಕೆಲವು ಫಲಕದ ಕಂಬಗಳು ಮುರಿದು ಬಿದ್ದಿರುವುದು ಕಂಡುಬಂದಿದ್ದು, ಪ್ರಕೃತಿ ವಿಕೋಪದಿಂದಾಗಿ ಹೀಗೆ ಆಗಿರಬಹುದೆಂಬ ಅನುಮಾನವಿದೆ. ಆದರೆ, ಫಲಕಗಳು ಜನವಸತಿ ಇರುವ ಭಾಗದಲ್ಲಿ ಮಾತ್ರ ಸರಿಯಾಗಿ ಉಳಿದಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.
“ಇದು ಕೇವಲ ವಾತಾವರಣದ ಪರಿಣಾಮವೋ? ಇಲ್ಲವೇ ಯಾವುದೋ ಕಿಡಿಗೇಡಿಗಳ ಕೃತ್ಯವೋ?” ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ರಾತ್ರಿ ವೇಳೆ ಅಥವಾ ಮಳೆಗಾಲದಲ್ಲಿ ಸಂಚರಿಸುವಾಗ ಸೂಚನಾ ಫಲಕ ವಿಲ್ಲದಿದ್ದರೆ ವಾಹನ ಸವಾರರು ಹಾಗೂ ಹೊಸಬರಿಗೆ ಇದರಿಂದ ಅಪಘಾತ ಸಂಭವಿಸುವ ಅಪಾಯವಿದೆ.
ಆಧಿಕಾರಿಗಳ ಮೌನ ಪ್ರಶ್ನಾರ್ಥಕ:
ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೂ ಈವರೆಗೆ ಯಾವುದೇ ಅಧಿಕಾರಿಗಳಿಂದ ತಪಾಸಣೆ ಅಥವಾ ಮರು ಅಳವಡಿಕೆ ಕಾರ್ಯ ಆರಂಭವಾಗಿಲ್ಲ. “ದಾರಶಾಹಿಯಾದ ಫಲಕಗಳನ್ನು ವಾಹನ ಸವಾರರ ಅನುಕೂಲಕ್ಕಾಗಿ ಶೀಘ್ರದಲ್ಲೇ ಪುನಃ ಅಳವಡಿಸುವಂತೆ ಒತ್ತಾಯಿಸಿದ್ದಾರೆ.









