

ನೆಲ್ಯಾಡಿ: ನೆಲ್ಯಾಡಿ ಕ್ಷೇತ್ರದ ಜನತೆ ಸರಿಯಾದ ಪೊಲೀಸ್ ಸೇವೆಗಾಗಿ ವರ್ಷಗಳಿಂದ ನಿರೀಕ್ಷಿಸುತ್ತಿದ್ದಾರೆ. ಈ ಪ್ರದೇಶದ ಭದ್ರತೆ ಮತ್ತು ತುರ್ತು ಸಂದರ್ಭಗಳಲ್ಲಿ ಸ್ಪಂದನೆ ಹೆಚ್ಚು ಪರಿಣಾಮಕಾರಿ ಆಗಬೇಕಾದ ಅನಿವಾರ್ಯತೆಯ ಹಿನ್ನೆಲೆಯಲ್ಲಿ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಉಷಾ ಅಂಚನ್ ಅವರು ಕರ್ನಾಟಕ ರಾಜ್ಯ ಗೃಹ ಸಚಿವರಿಗೆ ಪತ್ರ ಸಲ್ಲಿಸಿ, ನೆಲ್ಯಾಡಿ ಹೊರ ಠಾಣೆಯನ್ನು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯನ್ನಾಗಿ ಪರಿವರ್ತಿಸಲು ವಿನಂತಿಸಿದ್ದಾರೆ.
ನೆಲ್ಯಾಡಿ ಪ್ರದೇಶವು ದ.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶವಾಗಿದ್ದು, ಇಲ್ಲಿ ಈಗಿರುವ ಹೊರ ಠಾಣೆ ವ್ಯಾಪ್ತಿಯಲ್ಲಿ 7 ಗ್ರಾಮಗಳು ಸೇರಿವೆ. ಈ ವ್ಯಾಪ್ತಿಯಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಹೋಗುವ ವಾಹನಗಳು, ಪ್ರವಾಸಿಗರು, ಸರಕು ಸಾಗಣೆ ವಾಹನಗಳು ಎಲ್ಲಾ ಈ ಮಾರ್ಗದಲ್ಲೇ ಸಂಚರಿಸುತ್ತವೆ. ಅಪಘಾತಗಳು, ತುರ್ತು ಪರಿಸ್ಥಿತಿಗಳು ಉಂಟಾದಾಗ, ಉಪ್ಪಿನಂಗಡಿ ಅಥವಾ ಧರ್ಮಸ್ಥಳದಿಂದ ಅಧಿಕಾರಿಗಳು ಬರುವಷ್ಟರಲ್ಲಿ ಪರಿಸ್ಥಿತಿ ಗಂಭೀರವಾಗುತ್ತದೆ.
ಮಳೆಯ ಸಮಯದಲ್ಲಿ ಶಿರಾಡಿ ಘಾಟಿ ಪ್ರದೇಶದಲ್ಲಿ ರಸ್ತೆ ಕುಸಿತ, ಮರ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗುವುದು ಸಾಮಾನ್ಯ. ಈ ಎಲ್ಲ ಕಾರಣಗಳಿಂದ ಕೂಡಲೇ ಪೂರಕ ಪೊಲೀಸ್ ವ್ಯವಸ್ಥೆ ಬಗ್ಗೆ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ಜಿಲ್ಲಾ ಪಂಚಾಯಿತಿನ ಮಾಜಿ ಸದಸ್ಯ ಪಿ.ಪಿ ವರ್ಗೀಸ್, ಸರ್ವೋತ್ತಮ ಗೌಡ, ಶಿರಾಡಿ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷ ಎಂ.ಕೆ ಪೌಲೋಸ್ ಮೊದಲಾದವರು ಜೊತೆಗಿದ್ದರು.










