ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ನೂತನ ಕೊಠಡಿಗಳ ಉದ್ಘಾಟನೆ

ಶೇರ್ ಮಾಡಿ

ಭವಿಷ್ಯದ ಭಾರತ ರೂಪಿಸುವ ಶಿಕ್ಷಣ ದಾರಿಯ ಆರಂಭ- ಡಾ.ಪ್ರಭಾಕರ್ ಭಟ್ ಕಲ್ಲಡ್ಕ

ನೆಲ್ಯಾಡಿ: ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ನೈಜ ಪಠ್ಯವಸ್ತು ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಬೆಳೆಯಬೇಕು. ಅತ್ಯಂತ ಪುರಾತನ ಹಾಗೂ ಸಂಸ್ಕಾರಯುತ ಭಾಷೆ ಸಂಸ್ಕೃತ, ಅದು ಮಾತ್ರವಲ್ಲದೆ ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಗಳು ವಿಶ್ವದ ಮೌಲ್ಯಮಾಪನದ ದಿಕ್ಕು ತೋರಿಸುವಂತಹವು. ಇಂತಹ ಶಿಷ್ಟ ಹಾಗೂ ಆಧ್ಯಾತ್ಮಿಕ ಶಿಕ್ಷಣ ನೀಡುವ ಸಂಸ್ಥೆಗೆ ಮಕ್ಕಳನ್ನು ಕಳುಹಿಸುವುದರಿಂದ ಅವರು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳುತ್ತಾರೆ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ನೆಲ್ಯಾಡಿ ಶ್ರೀರಾಮ ವಿದ್ಯಾಲಯ, ಸೂರ್ಯನಗರ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಆಂಗ್ಲ ಮಾಧ್ಯಮ ವಿಭಾಗದ ಆಗತ-ಸ್ವಾಗತ ಕಾರ್ಯಕ್ರಮ ಮಂಗಳವಾರದಂದು ನೆರವೇರಿತು.

ನೂತನ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿದ ಪ್ರತಾಪ್ ಸಿಂಹ ನಾಯಕ್ ಅವರು “ಆಂಗ್ಲ ಭಾಷೆಯು ಇಂದು ಜಗತ್ತಿನ ವ್ಯವಹಾರ ಮತ್ತು ಸಂವಹನದ ಪ್ರಮುಖ ಸಾಧನವಾಗಿದೆ. ಆದರೆ ಆಂಗ್ಲವನ್ನು ಕಲಿಯುವಾಗ ನಾವೆಲ್ಲರೂ ನಮ್ಮ ಪರಂಪರೆ, ಧರ್ಮ, ಸಂಸ್ಕೃತಿ ಮತ್ತು ಭಾಷೆಯನ್ನು ಮರೆತರೆ, ಅದು ನಮ್ಮಲ್ಲಿನ ನಿಜವಾದ ವ್ಯಕ್ತಿತ್ವವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಆದ್ದರಿಂದ ಆಂಗ್ಲ ಜ್ಞಾನ ಮತ್ತು ಭಾರತೀಯ ಮೌಲ್ಯಗಳ ಸಂಯೋಜನೆಯಿಂದ ಶಿಕ್ಷಣದ ಹಾದಿ ಸಾರ್ಥಕವಾಗುತ್ತದೆ” ಎಂದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮಕ್ಕಳಿಗೆ ನಂಬಿಕೆ, ಸ್ವಾಭಿಮಾನ, ಸಂಸ್ಕಾರ ಮತ್ತು ವೈಜ್ಞಾನಿಕ ದೃಷ್ಟಿಕೋನ ನೀಡುವ ಕೆಲಸ ಶಾಲೆ ಮಾಡುತ್ತಿದೆ. ಈ ಸಂಸ್ಥೆಯನ್ನು ಆರಂಭಿಸುವಲ್ಲಿ ನಮ್ಮ ಉದ್ದೇಶವೂ ಇದೇ — ಮಕ್ಕಳಿಗೆ ಕೇವಲ ಪಠ್ಯಪುಸ್ತಕದ ಜ್ಞಾನವಲ್ಲ, ನಾಡು-ನುಡಿ, ನಂಬಿಕೆ ಹಾಗೂ ನಡತೆ ತಿಳಿಯುವಂಥ ವಿದ್ಯೆ ನೀಡುವುದು. ಸಂಪ್ರದಾಯ, ಆಚಾರ, ಸನಾತನ ಮೌಲ್ಯಗಳು ಪ್ರಾರಂಭದಿಂದಲೇ ಅವರ ಬದುಕಿನಲ್ಲಿ ಬೆಳೆಬೇಕು ಎಂಬುದು ನಮ್ಮ ಆಶಯ,” ಎಂದು ವಿವರಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮುರಳೀಧರ, ಕಾರ್ಯದರ್ಶಿ ಮೂಲಚಂದ್ರ ಕಾಂಚನ, ಹಾಗೂ ಶಾಲಾ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ ಉಪಸ್ಥಿತರಿದ್ದರು.

ನೂತನವಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಶಾಲಾ ಮಾತಾಜಿಯವರಿಂದ ಆರತಿ ಬೆಳಗಿ, ತಿಲಕವಿಟ್ಟು ಹೆಣ್ಣು ಮಕ್ಕಳಿಗೆ ಹೂವನ್ನು ನೀಡುವಂತಹ ಹಾಗೂ ಪೋಷಕರೊಂದಿಗೆ ವಿದ್ಯಾರ್ಥಿಗಳು ಹಿರಿಯರಿಂದ ಆಶೀರ್ವಾದ ಕಾರ್ಯಕ್ರಮವೊಂದು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀಧರ ಗೋರೆ, ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಕುಶಾಲಪ್ಪ ಗೌಡ ಪೂವಾಜೆ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಸುಬ್ರಾಯ ಪುಣಚ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ ಹೊಸವಕ್ಲು, ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಡಾ.ಮುರಳೀಧರ ಸ್ವಾಗತಿಸಿದರು. ಮಾತಾಜಿ ಶುಭರಾಣಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮೂಲಚಂದ್ರ ಕಾಂಚನ ವಂದಿಸಿದರು.

  •  

Leave a Reply

error: Content is protected !!