

ಕೊಕ್ಕಡ: ಕಳೆಂಜ ಗ್ರಾಮದಲ್ಲಿ ಜುಲೈ 14ರಂದು ನಾಪತ್ತೆಯಾಗಿದ್ದ ರೆಂಜದಡಿ ಮನೆ ನಿವಾಸಿ ಜಿನ್ನಪ್ಪ ಗೌಡ(76) ಅವರ ಶವ ಮಂಗಳವಾರ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ಜಿನ್ನಪ್ಪ ಗೌಡ ಅವರು ಜು.14ರಂದು ಬೆಳಿಗ್ಗೆ ಮನೆಯಿಂದ ಹೊರಟು ಬಳಿಕ ಮರಳಿರಲಿಲ್ಲ. ತಕ್ಷಣ ಮನೆಯವರು ಮತ್ತು ಗ್ರಾಮಸ್ಥರು ಸುತ್ತಮುತ್ತಲ ಭಾಗಗಳಲ್ಲಿ ಹುಡುಕಾಟ ನಡೆಸಿದ್ದರು ಆದರೂ ಪತ್ತೆ ಆಗಿರಲಿಲ್ಲ.
ಮಂಗಳವಾರ ಮತ್ತೆ ಸ್ಥಳೀಯ ಕ್ಯಾಮರಾ ಪರಿಶೀಲನೆ ನಡೆಸಿದಾಗ, ಕಾಯರ್ತಡ್ಕ ದಿಂದ ಅಮ್ಮಿನಡ್ಕ ಕಡೆಗೆ ಸಾಗುತ್ತಿರುವುದು ದೃಢಪಟ್ಟಿತು. ಈ ಮಾಹಿತಿ ಆಧಾರದ ಮೇಲೆ ಕುಟುಂಬದವರು ಸ್ಥಳೀಯರು ಜೊತೆಗೂಡಿ ಮಧ್ಯಾಹ್ನ ನಂತರ ಅರಸಿನಮಕ್ಕಿ, ಶಿಶಿಲ ಶೌರ್ಯವಿಪತ್ತು ನಿರ್ವಹಣಾ ತಂಡದ ಸಹಾಯದಿಂದ ಕುದ್ದ ಸಮೀಪದ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಿದಾಗ ಶವವಾಗಿ ಪತ್ತೆಯಾಗಿದೆ.
ಮೃತರು ಪುತ್ರ ಶಿವರಾಂ, ಪುತ್ರಿಯರಾದ ವೇದಾವತಿ, ಕುಸುಮ ಅವರನ್ನು ಅಗಲಿದ್ದಾರೆ.










