

ಕೊಕ್ಕಡ: ಕೊಕ್ಕಡ ಗ್ರಾಮದ ಸೌತಡ್ಕದ ಮುರತ್ತಮೇಲ್ ಬಳಿ ಎರಡು ಆನೆಗಳ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ದುರ್ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ಗುರುವಾರ ಸಂಭವಿಸಿದೆ. ಮೃತರನ್ನು ಸೌತಡ್ಕ ನಿವಾಸಿ ಬಾಲಕೃಷ್ಣ ಶೆಟ್ಟಿ (60) ಎಂದು ಗುರುತಿಸಲಾಗಿದೆ.
ಸೌತಡ್ಕದ ದೇವಸ್ಥಾನದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಈ ದುರ್ಘಟನೆ ನಡೆದಿದೆ. ಬಾಲಕೃಷ್ಣ ಶೆಟ್ಟಿ ಅವರು ಸೌತಡ್ಕ ಸಮೀಪ ಅಂಗಡಿಯೊಂದರಲ್ಲಿ ವ್ಯಾಪಾರ ನಡೆಸುತ್ತಿದ್ದು, ಗುರುವಾರ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಆನೆಗಳು ದಾಳಿ ನಡೆಸಿವೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಪ್ರೊಬೆಷನರಿ ಅರಣ್ಯಾಧಿಕಾರಿ ಹಸ್ತಾ ಶೆಟ್ಟಿ, ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಉಪ ವಲಯಾಧಿಕಾರಿ, ಕೊಕ್ಕಡ ಗ್ರಾಮ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಹಾಗೂ ಇಲಾಖೆಯ ಇತರ ಸಿಬ್ಬಂದಿಗಳು, ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ದೇಹವನ್ನು ಬೆಳ್ತಂಗಡಿಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ಮೃತರು ಪತ್ನಿ, ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.










