ಮೃತರ ಕುಟುಂಬಕ್ಕೆ ಸರ್ಕಾರದಿಂದ ರೂ.20 ಲಕ್ಷ ಪರಿಹಾರ ಹಾಗೂ ಮುಂದಿನ ಐದು ವರ್ಷಗಳ ಕಾಲ ತಿಂಗಳಿಗೆ ರೂ.4,000 ರಂತೆ ಸಹಾಯಧನ

ಕೊಕ್ಕಡ: ಕೊಕ್ಕಡ ಗ್ರಾಮದ ಸೌತಡ್ಕದಲ್ಲಿ ಗುರುವಾರ ನಡೆದ ಆನೆ ದಾಳಿಯಿಂದ ಬಾಲಕೃಷ್ಣ ಶೆಟ್ಟಿ (60) ಎಂಬವರು ಮೃತಪಟ್ಟ ಬಳಿಕ ಅರಣ್ಯ ಇಲಾಖೆ ತ್ವರಿತ ಹಾಗೂ ಗಂಭೀರ ಕ್ರಮ ಕೈಗೊಂಡಿದ್ದು, ಸ್ಥಳದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ 24 ಗಂಟೆಗಳ ಪರಿವೀಕ್ಷಣಾ ಕಾರ್ಯ ಆರಂಭಿಸಲಾಗಿದೆ.
ಅರಣ್ಯ ಪ್ರದೇಶದತ್ತ ತೆರಳಿದ ಆನೆಗಳ ಹಾದಿಯನ್ನು ನಿಖರವಾಗಿ ಮಾಪಿ, ಅವುಗಳನ್ನು ಮರಳಿ ಕಾಡಿನೊಳಗೆ ಹಿಮ್ಮೆಟ್ಟಿಸುವ ಜವಾಬ್ದಾರಿಯನ್ನು ಇಲಾಖೆ ಹೊಣೆಯಾಗಿ ಸ್ವೀಕರಿಸಿದೆ. ಈ ಹಿನ್ನಲೆಯಲ್ಲಿ ಯಾವುದೇ ಮತ್ತೊಂದು ದುರ್ಘಟನೆ ಸಂಭವಿಸದಂತೆ ಕ್ರಮ ಕೈಗೊಂಡು ಮುನ್ನೆಚ್ಚರಿಕಾ ಕ್ರಮಗಳಲ್ಲಿ ತೊಡಗಿದೆ.
ಆನೆಗಳೆರಡೂ ಈಗಾಗಲೇ ಅರಣ್ಯ ಭಾಗದತ್ತ ತೆರಳಿರುವುದಾಗಿ ಖಚಿತವಾಗಿದ್ದು, ಕುಶಾಲನಗರ ಆನೆ ಕ್ಯಾಂಪ್‌ನಿಂದ ಎಲಿಫೆಂಟ್ ಟಾಸ್ಕ್ ಫೋರ್ಸ್ ನ ನುರಿತ ನಾಲ್ವರು ಆನೆ ಡ್ರೈವರ್‌ಗಳನ್ನು ಸ್ಥಳಕ್ಕೆ ಕರೆಸಲಾಗಿದೆ. ಈ ತಂಡವು ಆನೆಗಳ ಚಲನವಲನದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ, ಅವುಗಳನ್ನು ಸುರಕ್ಷಿತವಾಗಿ ಮರಳಿ ಕಾಡಿಗೆ ತಿರುಗಿಸುವ ಕಾರ್ಯದಲ್ಲಿ ತೊಡಗಿದೆ.
ಕಾಪಿನಬಾಗಿಲಿನಿಂದ ಆರಂಭವಾದ ಆನೆ ಡ್ರೈವ್:
ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಆನೆ ಡ್ರೈವ್ ಆರಂಭವಾಗಿದ್ದು, ಈ ಸಂದರ್ಭ ಸಾರ್ವಜನಿಕರು ಆನೆಗಳಿಗೆ ತೊಂದರೆ ನೀಡದೆ ಸಹಕಾರ ನೀಡುವಂತೆ ಇಲಾಖೆಯವರು ವಿನಂತಿಸಿದ್ದಾರೆ. ಯಾವುದೇ ಮಾಹಿತಿಯಿದ್ದರೆ ನೇರವಾಗಿ ಅರಣ್ಯ ಇಲಾಖೆಗೆ ನೀಡಬೇಕೆಂದಿದ್ದಾರೆ.
ರಾತ್ರಿ ವೇಳೆ ಆನೆ ಜಮೀನಿಗೆ ಬಂದಲ್ಲಿ ಲೈಟ್ ತೋರಿಸುವುದು, ಪಟಾಕಿ ಸಿಡಿಸುವುದು, ಶಬ್ದ ಮಾಡುವಂತಹ ತೊಂದರೆ ನೀಡುವ ಕ್ರಿಯೆಗಳು ತೀವ್ರವಾಗಿ ನಿರ್ಬಂಧಿತವಾಗಿದ್ದು, ಈ ಕಾರ್ಯಾಚರಣೆಯನ್ನು ಕೇವಲ ಇಲಾಖೆಯ ಸಿಬ್ಬಂದಿಯೇ ನಡೆಸಲಿದ್ದಾರೆ. ಸಾರ್ವಜನಿಕರು ಯಾವುದೇ ಕ್ರಮ ಕೈಗೊಂಡು ತೊಂದರೆ ಆದಲ್ಲಿ, ಅದರ ಜವಾಬ್ದಾರಿ ಇಲಾಖೆಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅದರಂತೆ ಬೆಳ್ತಂಗಡಿ ತಹಶೀಲ್ದಾರರಿಗೆ, ಉಪ್ಪಿನಂಗಡಿ ಹಾಗೂ ಧರ್ಮಸ್ಥಳ ಪೊಲೀಸ್ ಇಲಾಖೆ, ಮೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಗತ್ಯವಿದ್ದಲ್ಲಿ ತುರ್ತಾಗಿ ಸಹಕಾರ ನೀಡುವಂತೆ ಸೂಚಿಸಲಾಗಿದೆ. ಮಾಧ್ಯಮದ ಮೂಲಕವೂ ಸಾರ್ವಜನಿಕರಿಗೆ ಎಚ್ಚರಿಕೆ ಜಾರಿಗೊಳಿಸಲಾಗಿದೆ.
ಅಧಿಕಾರಿಗಳ ಬೃಹತ್ ತಂಡ ಸ್ಥಳದಲ್ಲಿ:
ಘಟನಾ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಪ್ರೊಬೆಷನರಿ ಅರಣ್ಯಾಧಿಕಾರಿ ಹಸ್ತಾ ಶೆಟ್ಟಿ, ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಉಪವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಆಚಾರ್ಯ, ಭವಾನಿಶಂಕರ, ಯತೀಂದ್ರ, ರಾಜೇಶ್ ಹಾಗೂ ಅರಣ್ಯ ರಕ್ಷಕರಾದ ವಿನಯಚಂದ್ರ ಆಳ್ವ, ದಿವಾಕರ ರೈ, ವೀಕ್ಷಕರಾದ ದಾಮೋದರ ಪೂಜಾರಿ, ದಿನೇಶ್, ಚಾಲಕರಾದ ಕಿಶೋರ್ ಹಾಗೂ ತೇಜಕುಮಾರ್ ಸೇರಿದಂತೆ ಹಲವಾರು ಮಂದಿ ಅಧಿಕಾರಿಗಳು, ಸಿಬ್ಬಂದಿಗಳು ನಿರಂತರ ಕಾರ್ಯದಲ್ಲಿ ತೊಡಗಿದ್ದಾರೆ.
ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿಯ ಭೇಟಿ:
ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟೊನಿ ಮರಿಯಪ್ಪ ಅವರು ಗುರುವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಮೃತರ ಮನೆಗೂ ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಅವರು, “ಮೃತರ ಕುಟುಂಬಕ್ಕೆ ಸರ್ಕಾರದಿಂದ ರೂ.20 ಲಕ್ಷ ಪರಿಹಾರ ಹಾಗೂ ಮುಂದಿನ ಐದು ವರ್ಷಗಳ ಕಾಲ ತಿಂಗಳಿಗೆ ರೂ.4,000 ರಂತೆ ಸಹಾಯಧನ ನೀಡಲಾಗುವುದು” ಎಂದು ಹೇಳಿದರು.











