

ಕೊಕ್ಕಡ: ಕೊಕ್ಕಡ ಗ್ರಾಮದ ಸೌತಡ್ಕದಲ್ಲಿ ಗುರುವಾರ ವ್ಯಕ್ತಿಯೊಬ್ಬನ ಪ್ರಾಣವನ್ನೇ ಬಲಿ ಪಡೆದಿದ್ದ ಎರಡು ಕಾಡಾನೆಗಳನ್ನು ಕಾಡಿಗೆ ಹಾಯಿಸುವ ಕಾರ್ಯಾಚರಣೆ ಶನಿವಾರದಂದು ಎರಡನೇ ದಿನವೂ ಮುಂದುವರಿಯಿತು. ಕುಶಲನಗರದಿಂದ ಆಗಮಿಸಿದ್ದ ಎಲಿಫೆಂಟ್ ಟಾಸ್ಕ್ ಫೋರ್ಸ್‌ನ ನುರಿತ ಡ್ರೈವರ್‌ಗಳ ನೆರವಿನಿಂದ ಅರಣ್ಯ ಇಲಾಖೆ ಈ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ಅರಣ್ಯಾಧಿಕಾರಿಗಳ ಪ್ರಕಾರ, ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಂಪೂರ್ಣ ಅರಣ್ಯ ಪ್ರದೇಶದೊಳಗೆ ನಿಯೋಜನೆ ನಡೆಸಲಾಗಿದೆ. ಮುನ್ನೆಚ್ಚರಿಕೆಯ ಭಾಗವಾಗಿ ಅಧಿಕಾರಿಗಳ ಬೃಹತ್ ತಂಡ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಕಾರ್ಯಾಚರಣೆಯ ಪ್ರತಿ ಹಂತವನ್ನು ನಿಗದಿತ ನಿಯಮಾನುಸಾರ ನಿರ್ವಹಿಸಲಾಗುತ್ತಿದೆ.
ಕಾರ್ಯಾಚರಣೆಯ ಕೇಂದ್ರಬಿಂದುವಾಗಿರುವ ಸ್ಥಳದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಪ್ರೊಬೆಷನರಿ ಅರಣ್ಯಾಧಿಕಾರಿ ಹಸ್ತಾ ಶೆಟ್ಟಿ, ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಉಪವಲಯ ಅಧಿಕಾರಿಗಳಾದ ಶಿವಾನಂದ ಆಚಾರ್ಯ, ಭವಾನಿಶಂಕರ, ಯತೀಂದ್ರ, ರಾಜೇಶ್, ರಕ್ಷಣಾ ಸಿಬ್ಬಂದಿಗಳಾದ ವಿನಯಚಂದ್ರ ಆಳ್ವ, ದಿವಾಕರ ರೈ, ವೀಕ್ಷಕರಾದ ದಾಮೋದರ ಪೂಜಾರಿ, ದಿನೇಶ್, ಹಾಗೂ ಚಾಲಕರಾದ ಕಿಶೋರ್ ಮತ್ತು ತೇಜಕುಮಾರ್ ಸೇರಿದಂತೆ ಹಲವಾರು ಅಧಿಕಾರಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಡಾನೆಗಳ ಸಂಚಾರ ಸಾರ್ವಜನಿಕ ಜೀವಿತಕ್ಕೆ ಅಪಾಯವಾಗಿರುವ ಹಿನ್ನೆಲೆಯಲ್ಲಿ ಶಿಸ್ತಿನ ಮತ್ತು ಸಮನ್ವಯದ ಮೂಲಕ ನಡೆಸುತ್ತಿರುವ ಈ ಕಾರ್ಯಾಚರಣೆಗೆ ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ.










