

ನೆಲ್ಯಾಡಿ: ನೆಲ್ಯಾಡಿ ಸೂರ್ಯನಗರದ ಶ್ರೀರಾಮ ವಿದ್ಯಾಲಯದಲ್ಲಿ ಸಾಂಸ್ಕೃತಿಕ ದಿನದ ಅಂಗವಾಗಿ ಆಟಿಡೊಂಜಿ ಗೌಜಿ, ಕಾರ್ಗಿಲ್ ವಿಜಯ ದಿವಸ್, ಸಾಮೂಹಿಕ ಹುಟ್ಟುಹಬ್ಬ ಹಾಗೂ “ರಕ್ಷೆ ಕಟ್ಟೋಣ ಬನ್ನಿ” ಕಾರ್ಯಕ್ರಮಗಳನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಗೋಳಿತೊಟ್ಟು ಗ್ರಾ.ಪಂ. ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ ಮುಖ್ಯ ಅತಿಥಿಯಾಗಿ ಆಗಮಿಸಿ, ಬಾಲ್ಯದ ಆಟಿದ ನೆನಪುಗಳನ್ನು ಹಂಚಿಕೊಂಡರು. ಆಟಿ ತಿಂಗಳ ಆಹಾರ ಸಂಸ್ಕೃತಿ, ಕಾರ್ಗಿಲ್ ವಿಜಯ ದಿನದ ಮಹತ್ವ, ದೇಶ ಸೇವೆ ಹಾಗೂ ಹಿಂದೂ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಸುಬ್ರಾಯ ಪುಣಚ ಅವರು ರಕ್ಷಾ ಬಂಧನದ ಹಿಂದಿನ ಸಂಸ್ಕೃತಿಯ ಅರ್ಥವನ್ನು ವಿದ್ಯಾರ್ಥಿಗಳಿಗೆ ಬಿಂಬಿಸಿದರು. ಅವರು “ಸಂಸ್ಕಾರವೇ ಸಮಾಜದ ಶಕ್ತಿಯಾಗಿದೆ” ಎಂಬ ಮಾತುಗಳ ಮೂಲಕ ಮಕ್ಕಳಿಗೆ ವಿವರಿಸಿದರು.
ಮುಖ್ಯಶಿಕ್ಷಕ ಗಣೇಶ್ ವಾಗ್ಲೆ ಅವರು ಕಾರ್ಗಿಲ್ ಯುದ್ಧದ ಹಿನ್ನೆಲೆ, ಸೇನೆಯ ಧೈರ್ಯ, ಬಲಿದಾನ ಮತ್ತು ದೇಶಭಕ್ತಿಯ ಕುರಿತು ಮಕ್ಕಳ ಮನಸ್ಸಿನಲ್ಲಿ ರಾಷ್ಟ್ರ ಪ್ರೇಮದ ಬೀಜ ಬಿತ್ತಿದರು. ಕ್ರೀಡಾ ತರಬೇತುದಾರ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಸಂತೋಷ್ ಕೊಲ್ಯೊಟ್ಟು ಉಪಸ್ಥಿತರಿದ್ದರು.
ಕಾರ್ಯಕ್ರಮದ ಭಾಗವಾಗಿ ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ತಿಲಕವಿಟ್ಟು, ಸಿಹಿ ತಿನ್ನಿಸಿ ಅತಿಥಿಗಳು ಆಶೀರ್ವದಿಸಿದರು.
ವಿದ್ಯಾರ್ಥಿಗಳು ನೃತ್ಯ, ಹಾಡು, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಮಧ್ಯಾಹ್ನದ ಭೋಜನದ ಸಮಯದಲ್ಲಿ ಆಟಿದ ಋತು ವಿಶೇಷವಾದ ಪತ್ರಡೆ, ತಜಂಕ್, ನುಗ್ಗೆಸೊಪ್ಪು, ಹಲಸಿನ ಬೀಜದ ಪಲ್ಯ, ಉಪ್ಪಡ್ ಪಚ್ಚಿಲ್, ಕರಿಚೇವ್ ಗಸಿ, ಆಟಿ ಪೊರಿ ಹಾಗೂ ಪಾಯಸ ಉಣಬಡಿಸಲಾಯಿತು.
ರೋಹಿಣಿ ಮಾತಾಜಿ ಸ್ವಾಗತಿಸಿದರು, ರಮ್ಯ ಮಾತಾಜಿ ವಂದಿಸಿದರು. ನವ್ಯ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.










