ನೆಲ್ಯಾಡಿ: ಭಕ್ತಿ-ಸಮೃದ್ಧಿಯ ಪಾವನ ಪರ್ವ ವರಮಹಾಲಕ್ಷ್ಮಿ ವ್ರತ

ಶೇರ್ ಮಾಡಿ

ನೆಲ್ಯಾಡಿ: ಪ್ರತಿಯೊಬ್ಬರ ಜೀವನದಲ್ಲಿ ಶಾಂತಿ, ಸಮೃದ್ಧಿ, ಸಂತೋಷ, ಹಾಗೂ ಧನ-ಧಾನ್ಯಗಳು ಇರಬೇಕೆಂಬುದು ಸಹಜವಾದ ಆಕಾಂಕ್ಷೆ. ನಮ್ಮ ಸಂಸ್ಕೃತಿ, ನಮ್ಮ ಧಾರ್ಮಿಕ ಪರಂಪರೆಯಲ್ಲಿ ಲಕ್ಷ್ಮೀ ದೇವಿಯನ್ನು ಸಂಪತ್ತಿನ, ಸೌಭಾಗ್ಯದ, ಮತ್ತು ಶುಭದ ಸಂಕೇತವಾಗಿ ಆರಾಧಿಸಲಾಗುತ್ತದೆ. ವಿಶೇಷವಾಗಿ ಶ್ರಾವಣ ಮಾಸದ ಶುಕ್ರವಾರ, ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವುದು ಬಹಳ ಪಾವನವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ ಎಂದು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯ ಉಪನ್ಯಾಸಕಿ ಡಾ. ಗೀತಾ ಕುಮಾರಿ.ಟಿ ಎಂದರು.

ಶ್ರೀರಾಮ ವಿದ್ಯಾಲಯ, ಶ್ರೀರಾಮ ಶಿಶು ಮಂದಿರ ನೆಲ್ಯಾಡಿ, ಚಾಮುಂಡೇಶ್ವರಿ ಭಜನಾ ಮಂಡಳಿ ದೋಂತಿಲ ಮತ್ತು ಮಾತೃ ಮಂಡಳಿ ನೆಲ್ಯಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರದಂದು ಜರಗಿದ 16ನೇ ವರುಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ ಮತ್ತು ಧಾರ್ಮಿಕ ಸಭೆಯ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ದಿನ ಮಹಿಳೆಯರು ತಮ್ಮ ಮನೆಗಳಲ್ಲಿ ಲಕ್ಷ್ಮೀ ದೇವಿಯ ಪ್ರತಿಮೆಯನ್ನು ಅಥವಾ ಕಲಶವನ್ನು ಅಲಂಕರಿಸಿ, ಹೂವು, ಹಣ್ಣು, ಕುಂಕುಮ, ಅಕ್ಷತೆಗಳಿಂದ ಭಕ್ತಿಪೂರ್ವಕವಾಗಿ ಪೂಜಿಸುತ್ತಾರೆ. ವ್ರತದ ಸಂದರ್ಭದಲ್ಲಿ ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ, ಲಕ್ಷ್ಮೀ ಸಹಸ್ರನಾಮ, ಮತ್ತು ಲಕ್ಷ್ಮೀ ಅಷ್ಟಕ ಸ್ತೋತ್ರಗಳನ್ನು ಪಠಿಸುವುದು, ಮನಸ್ಸಿಗೆ ಶಾಂತಿ, ಮನೋಬಲ, ಮತ್ತು ಆಧ್ಯಾತ್ಮಿಕ ಶಕ್ತಿ ನೀಡುತ್ತದೆ. ಈ ವ್ರತವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಇದು ಕುಟುಂಬದ ಒಗ್ಗಟ್ಟು, ಪರಸ್ಪರ ಪ್ರೀತಿ, ಮತ್ತು ಗೌರವವನ್ನು ಬಲಪಡಿಸುವ ಒಂದು ಸಂಸ್ಕಾರ. ವ್ರತಾಚರಣೆ ಮಾಡುವ ಮಹಿಳೆಯರು, ತಮ್ಮ ಕುಟುಂಬದ ಎಲ್ಲ ಸದಸ್ಯರ ಆರೋಗ್ಯ, ಆಯುಷ್ಯ, ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಲಕ್ಷ್ಮೀ ದೇವಿಯ ಅನುಗ್ರಹದಿಂದ ಮನೆಯಲ್ಲಿ ದಾರಿದ್ರ್ಯ, ಕಲಹ, ಅಶಾಂತಿ ದೂರವಾಗಿ, ಶಾಂತಿ-ಸಂತೋಷ ನೆಲೆಸುತ್ತದೆ ಎಂದು ನಂಬಲಾಗುತ್ತದೆ. ಶಾಸ್ತ್ರಗಳಲ್ಲಿ, ‘ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ’ ಎಂದು ಹೇಳಲಾಗಿದೆ. ಅಂದರೆ, ಮಹಿಳೆಯನ್ನು ಗೌರವಿಸುವ ಮನೆಯಲ್ಲಿ ದೇವತೆಗಳು ನೆಲೆಸುತ್ತಾರೆ. ವರಮಹಾಲಕ್ಷ್ಮಿ ವ್ರತವು ಈ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಒಂದು ಸುಂದರವಾದ ಮಾರ್ಗವಾಗಿದೆ ಎಂದು ಹೇಳಿದರು.

ಬೆಳ್ತಂಗಡಿಯ ಧಾರ್ಮಿಕ ಮುಖಂಡ, ಬೆಂಗಳೂರು ಉದ್ಯಮಿ, ದಾನಿ ಕಿರಣ್ ಚಂದ್ರ.ಡಿ ಪುಷ್ಪಗಿರಿ ಮಾತನಾಡಿ ವರಮಹಾಲಕ್ಷ್ಮಿ ಪೂಜೆ ಕೇವಲ ಧನ-ಧಾನ್ಯ ಪ್ರಾಪ್ತಿಗೆ ಮಾತ್ರವಲ್ಲ, ಸಮಾಜದ ಕಲ್ಯಾಣ, ಪರಸ್ಪರ ಸಹಕಾರ ಹಾಗೂ ಸತ್ಯ-ಧರ್ಮ ಪಾಲನೆಯ ಪ್ರತೀಕ. ಇಂದಿನ ಯುಗದಲ್ಲಿ ಸಂಪತ್ತಿಗಿಂತ ಮುಖ್ಯವಾದದ್ದು ಒಗ್ಗಟ್ಟು, ನಂಬಿಕೆ ಹಾಗೂ ಮಾನವೀಯತೆ. ಲಕ್ಷ್ಮೀ ದೇವಿಯ ಅನುಗ್ರಹವನ್ನು ಪಡೆಯಲು, ನಾವು ನಮ್ಮ ಬದುಕಿನಲ್ಲಿ ಶ್ರದ್ಧೆ, ಶ್ರಮ ಮತ್ತು ಸತ್ಪ್ರವೃತ್ತಿಯನ್ನು ಬೆಳೆಸಬೇಕು. ನೆರವಿಗೈಯುವ ಮನೋಭಾವ, ಪರರ ನೋವು ತಿಳಿದು ಸಹಾಯ ಮಾಡುವ ಮನಸ್ಸು — ಇವೇ ನಿಜವಾದ ವರಮಹಾಲಕ್ಷ್ಮಿ ವ್ರತದ ಮೌಲ್ಯಗಳು” ಎಂದು ಹೇಳಿದರು.

ವರಮಹಾಲಕ್ಷ್ಮೀ ವೃತ ಪೂಜಾ ಸಮಿತಿ ಅಧ್ಯಕ್ಷೆ ಸುಪ್ರಿತಾ ರವಿಚಂದ್ರ ಹೊಸವಕ್ಲು ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ತಾರಾ ಕಿರಣ್ ಚಂದ್ರ ಡಿ ಪುಷ್ಪಗಿರಿ ಉರುವಾಲು, ನೆಲ್ಯಾಡಿ ಅಶ್ವಿನಿ ಆಸ್ಪತ್ರೆ ವೈದ್ಯ ಡಾ.ಶಮಂತ್ ವೈ.ಕೆ, ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯ ಸ್ಕೂಲ್ ಕೌನ್ಸಿಲ‌ರ್ ನಿವೇದಿತಾ ಪ್ರಸನ್ನ ಉಪಸ್ಥಿತರಿದ್ದರು.

ಮಹಿಳೆಯರಿಗೆ 1,300 ಸೀರೆ ವಿತರಣೆ
ಬೆಳ್ತಂಗಡಿಯ ಧಾರ್ಮಿಕ ಮುಖಂಡ ಕಿರಣ್ ಚಂದ್ರ.ಡಿ ಪುಷ್ಪಗಿರಿ ಹಾಗೂ ಅವರ ಧರ್ಮಪತ್ನಿ ತಾರಾ ಕಿರಣ್ ಚಂದ್ರ.ಡಿ ಪುಷ್ಪಗಿರಿ ಉರುವಾಲು ಅವರು ಪ್ರಸಾದ ರೂಪದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಹಿಳೆಯರಿಗೆ 1,300 ಸೀರೆ ವಿತರಣೆ ಮಾಡಿದರು.

ವೈದಿಕ ಕಾರ್ಯಕ್ರಮವನ್ನು ಅರ್ಚಕ ಅನಂತಪದ್ಮನಾಭ ಹಾಗೂ ಶ್ರೀಧರ ನೂಜಿನ್ನಾಯ ಅವರು ನಡೆಸಿಕೊಟ್ಟರು. ಸುಮಾರು ಸಾವಿರದ ಮುನ್ನೂರಷ್ಟು ಮಂದಿ ವರಮಹಾಲಕ್ಷ್ಮಿ ಪೂಜೆಯನ್ನು ಮಾಡಿಸಿದರು.

ಶ್ರೀರಾಮ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಮುರಳಿಧರ, ಕಾರ್ಯದರ್ಶಿ ಮೂಲಚಂದ್ರ, ಶಾಲಾ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ, ನೆಲ್ಯಾಡಿ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಆಡಳಿತ ಮಂಡಳಿಯ ಸದಸ್ಯರು, ಭಜನಾ ಮಂಡಳಿಯ ಸದಸ್ಯರು, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಪದಾಧಿಕಾರಿಗಳು, ಶಿಕ್ಷಕಿಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಿಕ್ಷಕಿ ಕಾವ್ಯ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಸೌಮ್ಯ ವಂದಿಸಿದರು.

  •  

Leave a Reply

error: Content is protected !!