ಕೊಕ್ಕಡ ಸೌತಡ್ಕದಲ್ಲಿ ಕಾಡಾನೆ ಅಟ್ಟಹಾಸ – ಕೃಷಿ ನಾಶ, ಜನರಲ್ಲಿ ಭಯ

ಶೇರ್ ಮಾಡಿ

ಕೊಕ್ಕಡ: ಕೊಕ್ಕಡ ಗ್ರಾಮದ ಸೌತಡ್ಕ ಕಡೀರ ಪ್ರದೇಶದಲ್ಲಿ ಕಾಡಾನೆ ದಾಳಿ ಮರುಕಳಿಸಿ ಅಪಾರ ಕೃಷಿ ಹಾನಿ ಉಂಟುಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಸೌತಡ್ಕದ ಮುರತ್ತಮೇಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಎರಡು ಕಾಡಾನೆಗಳು ದಾಳಿ ನಡೆಸಿ ಸ್ಥಳೀಯ ನಿವಾಸಿ ಬಾಲಕೃಷ್ಣ ಶೆಟ್ಟಿ ಮೃತಪಟ್ಟಿದ್ದ ಘಟನೆ ಇತ್ತೀಚಿಗೆ ನಡೆದಿತ್ತು. ಆ ಸಮಯದಲ್ಲಿ ಕುಶಾಲನಗರದಿಂದ ಆಗಮಿಸಿದ್ದ ಎಲಿಫೆಂಟ್ ಟಾಸ್ಕ್‌ಫೋರ್ಸ್‌ ನೆರವಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಾತ್ರಿ, ಹಗಲು ಮೂರು-ನಾಲ್ಕು ದಿನಗಳ ಸತತ ಪ್ರಯತ್ನದಿಂದ ಆನೆಗಳನ್ನು ಕಾಡಿಗೆ ಅಟ್ಟಿಸಿದ್ದರು. ಆದರೂ ಇದೀಗ ಪುನಃ ಇದೇ ಪ್ರದೇಶದಲ್ಲಿ ಕಾಡಾನೆ ಅಟ್ಟಹಾಸ ಮರುಕಳಿಸಿದ್ದು, ಸಾರ್ವಜನಿಕರಲ್ಲಿ ಆತಂಕವನ್ನು ಉಂಟುಮಾಡಿದೆ.

ಮಂಗಳವಾರ ರಾತ್ರಿ ಕಡೀರ ಕೋಟಿಯಪ್ಪ ಗೌಡ ಹಾಗೂ ಕಡೀರ ಗೋಪಾಲ ಅವರ ಕೃಷಿ ತೋಟಗಳಿಗೆ ನುಗ್ಗಿದ ಕಾಡಾನೆಯು ಬಾಳೆ, ತೆಂಗು, ಅಡಿಕೆ ಗಿಡಗಳು ಹಾಗೂ ನೀರಿನ ಡ್ರಮ್‌ಗಳಿಗೆ ಹಾನಿ ಉಂಟುಮಾಡಿದೆ. ಈ ದಾಳಿಯಿಂದ ರೈತರಿಗೆ ಭಾರೀ ಆರ್ಥಿಕ ನಷ್ಟವಾಗಿದೆ.

ಘಟನಾ ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ, ವೀಕ್ಷಕ ದಾಮೋದರ ಭೇಟಿ ನೀಡಿ ಹಾನಿ ಪರಿಶೀಲಿಸಿದರು. ಸರಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ ಅವರು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದರು.

ಕಾಡಾನೆಗಳ ನಿರಂತರ ದಾಳಿಯಿಂದ ಅರಣ್ಯ ಸಿಬ್ಬಂದಿಗಳಿಗೂ ತಲೆನೋವು ಹೆಚ್ಚುತ್ತಿದ್ದು, ಈ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

  •  

Leave a Reply

error: Content is protected !!