

ನೆಲ್ಯಾಡಿ: ನೇರ್ಲ-ಇಚ್ಲಂಪಾಡಿ ಸರಕಾರಿ ಉನ್ನತೀಕರಿಸಿದ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಭಾವಪೂರ್ಣವಾಗಿ ಆಚರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ವಸಂತ ಬಿಜೇರು ಅವರು ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ಸಾಮಾಜಿಕ ಜವಾಬ್ದಾರಿಯ ಭಾವನೆ ಬೆಳೆಸುವಂತೆ ಕರೆ ನೀಡಿದರು.
ಧ್ವಜಾರೋಹಣದ ಬಳಿಕ ಶಾಲಾ ಮಕ್ಕಳಿಂದ ನೇರ್ಲ ಪೇಟೆಯವರೆಗೆ ಸ್ವಾತಂತ್ರ್ಯೋತ್ಸವ ಪಥಸಂಚಲನ ನಡೆಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ನೇರ್ಲ ಪೇಟೆಯ ಅಂಗಡಿ ಮಾಲೀಕರು ಸಿಹಿ ವಿತರಿಸಿದರು. ಇಚ್ಲಂಪಾಡಿ ಹಾಲು ಉತ್ಪಾದಕರ ಸಂಘ ಪಾನೀಯದ ವ್ಯವಸ್ಥೆಯಲ್ಲಿ ಸಹಕರಿಸಿತು.
ಬಳಿಕ ಎಸ್‌ಡಿಎಂಸಿ ಅಧ್ಯಕ್ಷ ವಸಂತ ಬಿಜೇರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೌಕ್ರಾಡಿ ಗ್ರಾಮ ಪಂಚಾಯತ್ ಸದಸ್ಯೆ ಡೈಸಿ ವರ್ಗೀಸ್, ಉಪಾಧ್ಯಕ್ಷೆ ಶ್ರೀಮತಿ ನಂದಾ, ಕೆಡಿಪಿ ಸದಸ್ಯರಾದ ಗಿರೀಶ್ ಸಾಲ್ಯಾನ್, ಲೋಕೇಶ್ ನೇರ್ಲ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸತೀಶ್ ಪಳಿಕೆ, ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ನೇರ್ಲ ಅಧ್ಯಕ್ಷ ಅಕ್ಷತ್ ನೇರ್ಲ ಹಾಗೂ ಮುಖ್ಯ ಶಿಕ್ಷಕ ಡಾ. ಗಿರೀಶ್ ಹೆಚ್.ಎಂ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಸಾಧನೆಗೈದ ಕು.ಸಿಂಚನಾ ಮತ್ತು ಎಂಟನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ಕು.ಪೂರ್ವಿ ಅವರನ್ನು ಅಭಿನಂದಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಹಾಗೂ ಹಳೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಊರ ವಿದ್ಯಾಭಿಮಾನಿಗಳು ಭಾಗವಹಿಸಿದರು.
ಮುಖ್ಯ ಶಿಕ್ಷಕ ಡಾ. ಗಿರೀಶ್ ಹೆಚ್.ಎಂ ಸ್ವಾಗತಿಸಿದರು. ಶಿಕ್ಷಕಿ ಆಥಿರಾ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಸೌಮ್ಯ ವಂದಿಸಿದರು. ಚೈತ್ರ, ಆಥಿರಾ, ಸೌಮ್ಯ ಮತ್ತು ಅನುಷಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತರಬೇತಿ ನೀಡಿದರು.
ಭೋಜನದ ವ್ಯವಸ್ಥೆಯನ್ನು ನೇರ್ಲ ಕ್ರಿಕೆಟರ್ಸ್ ಅಕಾಡೆಮಿಯ ಸದಸ್ಯರು, ಹಳೆ ವಿದ್ಯಾರ್ಥಿ ದಿವಂಗತ ಚೇತನ್ ಶೆಟ್ಟಿ ಅವರ ಸಂಸ್ಮರಣೆಯಾಗಿ ಆಯೋಜಿಸಿದರು.











