

ನೆಲ್ಯಾಡಿ: ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ವೈಭವದಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಪುಟ್ಟ ಕೃಷ್ಣ ವೇಷಧಾರಿ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಮೂಲಕ ಚಾಲನೆ ನೀಡಲಾಯಿತು. ನಂತರ ಶಾಲೆಯ ಪುಟಾಣಿ ಮಕ್ಕಳು ಕೃಷ್ಣ-ರಾಧೆ ವೇಷ ಧರಿಸಿ ಕುಣಿತ, ಭಜನೆ ಹಾಗೂ ಮೆರವಣಿಗೆಯ ಮೂಲಕ ಕಾರ್ಯಕ್ರಮಕ್ಕೆ ಆಕರ್ಷಣೆ ಹೆಚ್ಚಿಸಿದರು. ಎಲ್ಲಾ ಕೃಷ್ಣ-ರಾಧೆಯರನ್ನು ಆರತಿ ಎತ್ತಿ, ತಿಲಕವಿಟ್ಟು ಸ್ವಾಗತಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಚಿಲಂಪಾಡಿ ದೇವಿಪ್ರಸಾದ್ ಅವರು ಶ್ರೀಕೃಷ್ಣನ ಜನನ, ಬಾಲ್ಯದ ಲೀಲೆಗಳು ಹಾಗೂ ಧಾರ್ಮಿಕ ಸಂದೇಶಗಳ ಬಗ್ಗೆ ಮಕ್ಕಳಿಗೆ ಹೃದಯಂಗಮವಾಗಿ ತಿಳಿಸಿದರು.
ವಿದ್ಯಾಲಯದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಶ್ರೀಧರ ಗೋರೆಯವರು ಶ್ರೀಕೃಷ್ಣನ ಮಹಿಮೆ, ತುಂಟಾಟಗಳು ಮತ್ತು ಅವುಗಳಲ್ಲಿರುವ ಪಾಠಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಮುರಳಿಧರ, ಕಾರ್ಯದರ್ಶಿ ಮೂಲಚಂದ್ರ ಕಾಂಚನ, ಕನ್ನಡ ಮಾಧ್ಯಮ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ, ಆಂಗ್ಲ ಮಾಧ್ಯಮ ಮುಖ್ಯಶಿಕ್ಷಕಿ ಕಾವ್ಯ ಉಪಸ್ಥಿತರಿದ್ದರು. ಸನ್ನಿಧಿ ಸ್ವಾಗತಿಸಿದರು, ಯಶ್ವಿನ್ ವಂದಿಸಿದರು, ನವ್ಯ ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಮಡಕೆ ಒಡೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಯಿತು. ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.











