


ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಕಡಬ ತಾಲೂಕು, ನೆಲ್ಯಾಡಿ ವಲಯ ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕಡಬ ಇವುಗಳ ಆಶ್ರಯದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮ ಉದನೆಯ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಹಾಗೂ ಸಂತ ಅಂಥೋನಿ ಪ್ರೌಢ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸೈಂಟ್ ಅಂಟನಿಸ್ ವಿದ್ಯಾಸಂಸ್ಥೆಗಳ ಮೇಲ್ವಿಚಾರಕ ಡೀಕನ್ ಸಂದೇಶ್ ಜಾರ್ಜ್ ನೆರವೇರಿಸಿದರು. ವಲಯಾಧ್ಯಕ್ಷ ಕುಶಾಲಪ್ಪ ಗೌಡ ಪಿ.ಎನ್ ಅಧ್ಯಕ್ಷತೆ ವಹಿಸಿದ್ದರು.
ಪುಂಚಪ್ಪಡಿ ಸಮರ್ಥ ಜನಸೇವಾ ಟ್ರಸ್ಟ್ ಅಧ್ಯಕ್ಷ ಗಿರಿಶಂಕರ ಸುಲಾಯ ಮಾತನಾಡಿ “ದುಶ್ಚಟಮುಕ್ತ ಸಮಾಜಕ್ಕಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಅನೇಕ ಶ್ಲಾಘನೀಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ,” ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕಡಬ ಅಧ್ಯಕ್ಷ ಮಹೇಶ್ ಕೆ. ಸವಣೂರು ಅವರು “ಮಾದಕ ವಸ್ತುಗಳು ಮತ್ತು ದುಶ್ಚಟಗಳಿಂದ ವಿದ್ಯಾರ್ಥಿಗಳ ಜೀವನ ಹಾಳಾಗುತ್ತಿದೆ. ಉತ್ತಮ ಶಿಕ್ಷಣ ಪಡೆದವರೇ ದುಶ್ಚಟಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ. ಶಿಕ್ಷಣದ ಅರ್ಥ ಆದರ್ಶಪ್ರಾಯ ಜೀವನದಲ್ಲಿ ತೋರುತ್ತದೆ,” ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಸಿಬಿಚನ್ ಟಿ.ಸಿ, ಸಂತ ಅಂಥೋನಿ ಹೈಸ್ಕೂಲ್ ಮುಖ್ಯಶಿಕ್ಷಕ ಶ್ರೀಧರ ಗೌಡ ಬಿ, ಉದನೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ದಿವಾಕರ ಗೌಡ ಎಸ್.ಎ, ಪುತ್ತಿಗೆ ಪ್ರಗತಿ ಬಂಧು ಸ್ವಸಹಾಯ ಸಂಘ ಒಕ್ಕೂಟ ಅಧ್ಯಕ್ಷ ಲೋಕಯ್ಯ ಗೌಡ, ಸಂಘದ ಸದಸ್ಯರಾದ ಗಂಗಾಧರ, ರಾಜೇಶ್ ಇಡ್ಯಾಡಿ, ಪುತ್ತಿಗೆ ಒಕ್ಕೂಟ ಸೇವಾ ಪ್ರತಿನಿಧಿ ಪ್ರಿಯಾಲತ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕ ಆನಂದ್ ಡಿ.ಬಿ ಸ್ವಾಗತಿಸಿದರು, ಸುಮಿತ್ರ ಎಸ್. ಉದನೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಸಂಸ್ಥೆಯ ಶಿಕ್ಷಕ ಯಶೋಧರ ವಂದಿಸಿದರು.








