ಮಂಗಳೂರು: ವಿಮಾನ ಪ್ರಯಾಣಿಕರ ಲಗೇಜ್ ನಿಂದ ಚಿನ್ನಾಭರಣ ಕಳವು – 5 ಏರ್ ಇಂಡಿಯಾ ಸ್ಯಾಟ್ಸ್ ನೌಕರರ ಬಂಧನ

ಶೇರ್ ಮಾಡಿ

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಪ್ರಯಾಣಿಕರ ಲಗೇಜ್ ಕಳವು ಪ್ರಕರಣದಲ್ಲಿ ಐದು ಏರ್ ಇಂಡಿಯಾ ಸ್ಯಾಟ್ಸ್ ನೌಕರರನ್ನು ಮಂಗಳೂರು ನಗರ ಪೊಲೀಸ್ ವಶಕ್ಕೆ ಪಡೆದು ಬಂಧಿಸಿದೆ.

2025ರ ಆಗಸ್ಟ್ 30ರಂದು ಬೆಳಿಗ್ಗೆ ಬೆಂಗಳೂರಿನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದ ಮಹಿಳಾ ಪ್ರಯಾಣಿಕರು ತಮ್ಮ ಲಗೇಜ್ ಪರಿಶೀಲಿಸಿದಾಗ, 56 ಗ್ರಾಂ ತೂಕದ ಚಿನ್ನಾಭರಣ (ಅಂದಾಜು ಮೌಲ್ಯ ₹4,50,000) ಕಾಣೆಯಾಗಿತ್ತು. ಇದರ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಅ.ಕ್ರ 157/2025, ಕಲಂ 303(2) ಬಿ.ಎನ್.ಎಸ್ ಅಡಿಯಲ್ಲಿ ದಾಖಲಿಸಿ ತನಿಖೆ ಆರಂಭಿಸಲಾಯಿತು.

ತನಿಖೆಯಲ್ಲಿ, ಕಂದಾವರದ ನಿವಾಸಿ ನಿತಿನ್, ಮೂಡುಪೆರಾರದ ಸದಾನಂದ ಹಾಗೂ ರಾಜೇಶ್, ಬಜಪೆಯ ಪ್ರವೀಣ್ ಫೆರ್ನಾಂಡಿಸ್ ಮತ್ತು ಮೂಡುಪೆರಾರದ ರವಿರಾಜ್ ಎಂಬ ಐವರನ್ನು ಪೊಲೀಸರು ವಶಕ್ಕೆ ಪಡೆದರು. ವಿಚಾರಣೆ ವೇಳೆ ಅವರು ಲಗೇಜ್‌ನಿಂದ ಚಿನ್ನ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಕಳವು ಮಾಡಿದ ಚಿನ್ನವನ್ನು ಆರೋಪಿತರು ರವಿರಾಜ್ ಗೆ ಮಾರಾಟ ಮಾಡಿದ್ದು, ಸುಮಾರು 50 ಗ್ರಾಂ ತೂಕದ ಚಿನ್ನದ ಗಟ್ಟಿ (₹5 ಲಕ್ಷ ಮೌಲ್ಯ) ವಶಪಡಿಸಿಕೊಳ್ಳಲಾಗಿದೆ. ರವಿರಾಜ್ ವಿರುದ್ಧ ಕಳವು ಮಾಲವನ್ನು ಸ್ವೀಕರಿಸಿದ ಆರೋಪ (317(2) ಬಿ.ಎನ್.ಎಸ್) ದಾಖಲಿಸಲಾಗಿದೆ.

ಪರಿಶೀಲನೆಯಲ್ಲಿ, ಇದೇ ತಂಡವು ಜನವರಿ 2025ರಲ್ಲಿ ಮನೋಹರ್ ಶೆಟ್ಟಿ ಎಂಬ ಪ್ರಯಾಣಿಕರ ಬ್ಯಾಗಿನಿಂದ ₹2 ಲಕ್ಷ ನಗದು ಕಳವು ಮಾಡಿದ್ದನ್ನು ಪತ್ತೆಹಚ್ಚಲಾಗಿದೆ. ಈ ಪ್ರಕರಣವು ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 27/2025 ಅಡಿಯಲ್ಲಿ ದಾಖಲಾಗಿತ್ತು.

ಸುದೀರ್ಘ 9 ವರ್ಷಗಳಿಂದ ಈ ಆರೋಪಿಗಳು ಏರ್ ಇಂಡಿಯಾ ಸ್ಯಾಟ್ಸ್‌ನಲ್ಲಿ ಲೋಡರ್–ಅನ್‌ಲೋಡರ್ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಐವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಪ್ರಯಾಣಿಕರಿಗೆ ಎಚ್ಚರಿಕೆ
ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಲೆಬಾಳುವ ವಸ್ತುಗಳಾದ ಚಿನ್ನಾಭರಣ, ನಗದು ಇತ್ಯಾದಿಗಳನ್ನು ಲಗೇಜ್ ಮೂಲಕ ಕಳುಹಿಸುವಾಗ ನೌಕರರು ಲಗೇಜ್‌ಗಳನ್ನು ತೆರೆಯುವ ಪ್ರಯತ್ನ ಮಾಡುತ್ತಿದ್ದರು. ಕೆಲವೊಮ್ಮೆ ಸುಲಭವಾದ ಪಾಸ್‌ವರ್ಡ್ ಲಾಕ್‌ಗಳನ್ನು ಒಡೆದು ಕಳವು ಮಾಡಿರುವುದು ಬಹಿರಂಗವಾಗಿದೆ. ಆದ್ದರಿಂದ ಪ್ರಯಾಣಿಕರು ಈ ರೀತಿಯ ನಿರ್ಲಕ್ಷ್ಯ ಮಾಡದೇ, ತಮ್ಮ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಸಾಗಿಸಿಕೊಳ್ಳಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

  •  

Leave a Reply

error: Content is protected !!