ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ‘ಸ್ವಾಸ್ಥ್ಯ ಸಂಕಲ್ಪ’

ಶೇರ್ ಮಾಡಿ

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ) ಕಡಬ ತಾಲೂಕು ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕಡಬ ಇವುಗಳ ಆಶ್ರಯದಲ್ಲಿ ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗಾಗಿ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ರೇಂಜಿಲಾಡಿ ಬೀಡು ಅರಸರಾದ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ಉದ್ಘಾಟಿಸಿ ಮಾತನಾಡಿ, “ಮಕ್ಕಳು ದುರಭ್ಯಾಸ ಮತ್ತು ದುಶ್ಚಟಗಳಿಂದ ದೂರವಿದ್ದು ತಂದೆ-ತಾಯಿಗೆ, ಸಮಾಜಕ್ಕೆ ಕಪ್ಪು ಚುಕ್ಕಿ ತರದಂತೆ ಉತ್ತಮ ಜೀವನ ನಡೆಸಬೇಕು” ಎಂದು ಕರೆ ನೀಡಿದರು.

ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷರಾದ ಮಹೇಶ್ ಕೆ. ಸವಣೂರು ಅವರು, “ಮಾದಕ ವಸ್ತುಗಳು ಹಾಗೂ ದುಶ್ಚಟಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಗೊಳಿಸುತ್ತವೆ. ಮುಂದಿನ ದಿನಗಳಲ್ಲಿ ಕುಟುಂಬಕ್ಕೆ ಆಧಾರವಾಗಬೇಕಾದ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾದರೆ ಮನೆ ಮಂದಿಯ ಬದುಕೇ ಹಾಳಾಗುತ್ತದೆ. ಚಿನ್ನದಂತ ಜೀವನವನ್ನು ನಾಶ ಮಾಡದೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆದು ಬರಬೇಕು” ಎಂದು ಹಿತವಚನ ಹೇಳಿದರು.

ಸಭಾಧ್ಯಕ್ಷತೆಯನ್ನು ವಹಿಸಿದ ಕಾಲೇಜು ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್. ಅವರು, “ವ್ಯಸನಗಳಿಂದ ದೂರವಿದ್ದು ಒಳ್ಳೆಯ ಸಂಸ್ಕೃತಿ ಮತ್ತು ಸಭ್ಯತೆಯನ್ನು ಅಳವಡಿಸಿಕೊಂಡರೆ ಮಾತ್ರ ಸಾರ್ಥಕ ಬದುಕು ಸಾಧ್ಯ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಥನಿ ಪ್ರೌಢಶಾಲೆಯ ಮುಖ್ಯಗುರು ತೋಮಸ್ ಎ.ಕೆ., ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ವಲಯದ ಸದಸ್ಯೆ ಪಿ.ವೈ. ಕುಸುಮ, ನೂಜಿಬಾಳ್ತಿಲ ಒಕ್ಕೂಟದ ಅಧ್ಯಕ್ಷ ಸುದೀಶ್ ಕುಮಾರ್ ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಕ ವಿಜೇಶ್ ಜೈನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸೇವಾಪ್ರತಿನಿಧಿ ಸುಗುಣ ವಂದಿಸಿದರು.

  •  

Leave a Reply

error: Content is protected !!